‘ಕರ್ನಾಟಕದ ಜನತೆ ಸುಪ್ರೀಂಕೋರ್ಟ್‌ನಿಂದ ಇಂತಹ ತೀರ್ಪು ನಿರೀಕ್ಷಿಸಿರಲಿಲ್ಲ’
ಕೇಂದ್ರ ಸಚಿವ ಸದಾನಂದ ಗೌಡ

ಹೊಸದಿಲ್ಲಿ, ಸೆ.12: ಕರ್ನಾಟಕದ ಜನತೆ ಕಾವೇರಿ ನೀರಿನ ಹಂಚಿಕೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟಿನಿಂದ ಇಂತಹ ತೀರ್ಪನ್ನು ನಿರೀಕ್ಷಿಸಿರಲಿಲ್ಲ. ಹೀಗಾಗಿ ಭಾವೋದ್ವೇಗಕ್ಕೆ ಒಳಗಾಗಿ ಹಿಂಸಾಚಾರದಲ್ಲಿ ತೊಡಗಿದ್ದಾರೆ’’ ಎಂದು ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಬಗ್ಗೆ ಕೇಂದ್ರ ಸಚಿವ ಸದಾನಂದ ಗೌಡ ಪ್ರತಿಕ್ರಿಯಿಸಿದ್ದಾರೆ.
‘‘ಕರ್ನಾಟಕ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್ ಕರ್ನಾಟಕದ ಪರಿಸ್ಥಿತಿಯನ್ನು ಅವಲೋಕಿಸಲು ತನ್ನ ತಂಡವನ್ನು ಕಳುಹಿಸಿಕೊಟ್ಟು, ಕೆಲವು ಅಂಶವನ್ನು ಕಲೆಹಾಕಿದ ಬಳಿಕ ಅಂತಿಮ ನಿರ್ಧಾರಕ್ಕೆ ಬರಲಿದೆ ಎಂದು ನಾವು ಭಾವಿಸಿದ್ದೆವು. ಆದರೆ, ಅಂತದ್ದೇನೂ ನಡೆಯಲಿಲ್ಲ’’ಎಂದು ಗೌಡ ಹೇಳಿದರು.
‘‘ಇಂತಹ ಪರಿಸ್ಥಿತಿಯಲ್ಲಿ ಜನರು ಭಾವೋದ್ವೇಗಕ್ಕೆ ಒಳಗಾಗುವುದು ಸಹಜ. ಆದಾಗ್ಯೂ, ರಾಜ್ಯದ ಜನರು ಶಾಂತಿ, ಕಾನೂನು-ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಎಂದು ನಾನು ವಿನಂತಿಸುವೆ’’ ಎಂದು ಗೌಡ ಹೇಳಿದ್ದಾರೆ.
Next Story





