ಝೀ ಸಂಪಾದಕ ಸಮೀರ್ ಅಹ್ಲುವಾಲಿಯಾ ರಾಜೀನಾಮೆ
100 ಕೋಟಿ ಸುಲಿಗೆ ಪ್ರಕರಣದ ಆರೋಪಿ

ಹೊಸದಿಲ್ಲಿ, ಸೆ.12 : ಉದ್ಯಮಿ ನವೀನ ಜಿಂದಾಲ್ ಅವರಲ್ಲಿ 100 ಕೋಟಿ ಲಂಚ ಕೇಳಿದ ಪ್ರಕರಣದ ಪ್ರಮುಖ ಆರೋಪಿ ಝೀ ನ್ಯೂಸ್ ಸಂಪಾದಕ ಸಮೀರ್ ಅಹ್ಲುವಾಲಿಯಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಸಮೀರ್ ಹಾಗು ಅವರ ಸೋದ್ಯೋಗಿ ಸುಧೀರ್ ಚೌಧರಿ ತಿಹಾರ್ ಜೈಲು ಸೇರಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಇತ್ತೀಚಿಗೆ ಚಾನಲ್ ಕಚೇರಿಯಲ್ಲಿ ನಡೆದ ತುರ್ತು ಸಭೆಯೊಂದರಲ್ಲಿ ಚಾನಲ್ ಮುಖ್ಯಸ್ಥ ಸುಭಾಷ್ ಚಂದ್ರ ಅವರ ಆಪ್ತ ಅಮಿತ್ ಜೈನ್ ಅವರು ಸಂಸ್ಥೆಯ ಹಿತಾಸಕ್ತಿಯ ಮುಂದೆ ಯಾರು ಮುಖ್ಯ ಅಲ್ಲ. ಅದಕ್ಕಾಗಿ ಯಾರನ್ನು ಬೇಕಾದರೂ ಕೆಲಸದಿಂದ ತೆಗೆಯಲಾಗುವುದು ಎಂದು ಸ್ಪಷ್ಟವಾಗಿ ಹೇಳಿದ್ದರು. ಆ ಬಳಿಕ ಈ ಬೆಳವಣಿಗೆ ನಡೆದಿದೆ.
ಸಮೀರ್ ಲಂಚ ಪ್ರಕರಣದಲ್ಲಿ ( ಸಂಸ್ಥೆಯ ಪರವಾಗಿ ಮಾತನಾಡಿ ) ಆರೋಪಿಯಾಗಿದ್ದರಿಂದ ಅವರ ಕೆಲಸ ಸುರಕ್ಷಿತ ಎಂದು ತಿಳಿದಿದ್ದರೆ ಅದು ತಪ್ಪು ಎಂದೂ ಅಮಿತ್ ಹೇಳಿದ್ದರು. ಆಗಲೇ ರಾಜೀನಾಮೆ ನೀಡಲು ತಾನು ಸಿದ್ಧ ಎಂದು ಸಮೀರ್ ಹೇಳಿದ್ದರು.
ಕಾನೂನು ಪ್ರಕ್ರಿಯೆಯನ್ನು ಸರಿಯಾಗಿ ಪಾಲಿಸದಿದ್ದಲ್ಲಿ ಮತ್ತೆ ತಿಹಾರ್ ಜೈಲಿಗೆ ಕಲಿಸಲಾಗುವುದು ಎಂದು ಸಮೀರ್ ಹಾಗು ಸುಧೀರ್ ಅವರಿಗೆ ಜುಲೈ ನಲ್ಲಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶ ಟಿ. ಎಸ್. ಠಾಕೂರ್ ಅವರ ಪೀಠ ಎಚ್ಚರಿಸಿತ್ತು.





