ಸೆ.15ರಂದು ‘ಡೊಂಬರಾಟ’ ತುಳು ಚಲನಚಿತ್ರ ಬಿಡುಗಡೆ

ಉಡುಪಿ, ಸೆ.12: ಬ್ರಹ್ಮಾವರ ಮೂವೀಸ್ ನಿರ್ಮಾಣದ ಹಲವು ವಿಶೇಷತೆಗಳನ್ನು ಒಳಗೊಂಡ ತುಳು ಚಿತ್ರ ‘ಡೊಂಬರಾಟ’ ಇದೇ ಸೆ.15ರ ಗುರುವಾರ ಕರ್ನಾಟಕ ರಾಜ್ಯದಾದ್ಯಂತ 100 ಚಲನಚಿತ್ರ ಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಳ್ಳಲಿದೆ ಎಂದು ನಿರ್ದೇಶಕ ರಂಜಿತ್ ಸುವರ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತುಳು ಸಿನಿಮಾ ಇತಿಹಾಸದಲ್ಲೇ ಇದೇ ಮೊದಲ ಬಾರಿ ಹಾಡೊಂದರ ಚಿತ್ರೀಕರಣದಲ್ಲಿ ಒಂದು ಸಾವಿರ ಕಲಾವಿದರು ನೃತ್ಯ ಮಾಡಿದ್ದಾರೆ ಎಂದವರು ತಿಳಿಸಿದರು. ಅಲ್ಲದೇ ಕನ್ನಡದ ಖ್ಯಾತ ಚಿತ್ರನಟರಾದ ಉಪೇಂದ್ರ ಹಾಗೂ ಉಗ್ರಂ ಶ್ರೀಮುರಳಿ ಅವರು ಪ್ರಪ್ರಥಮ ಬಾರಿಗೆ ತುಳು ಹಾಡನ್ನು ಹಾಡಿದ್ದಾರೆ ಎಂದರು.
ಹಲವು ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ದುಡಿದಿರುವ ರಂಜಿತ್ ಸುವರ್ಣ ಅದೇ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶನ ಮಾಡಿದ್ದಾರೆ. ಮಂಗಳೂರಿನ ಅಮಿತ್ ಚಿತ್ರದ ನಾಯಕರಾಗಿದ್ದಾರೆ. ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಅಗ್ನಿಸಾಕ್ಷಿ’ಯಲ್ಲಿ ಅವರು ಈಗಾಗಲೇ ಎಲ್ಲರ ಗಮನ ಸೆಳೆದಿದ್ದಾರೆ. ಚಿತ್ರಕ್ಕೆ ಮೂವರು -ಭವ್ಯ, ಪೂಜಾ ಶೆಟ್ಟಿ ಹಾಗೂ ನೀಮಾ-ನಾಯಕಿಯರಾಗಿದ್ದಾರೆ.
ಉಳಿದಂತೆ ಅರವಿಂದ್ ಬೋಳಾರ್, ಉಮೇಶ್ ಮಿಜಾರ್, ರಘು ಪಾಂಡೇಶ್ವರ, ಶರತ್ ಕದ್ರಿ, ರಂಜನ್ ಬೋಳೂರು, ಪ್ರತಿಮಾ ನಾಯಕ್, ರಂಜಿತಾ ಶೇಟ್ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಸಂಗೀತ ನಿರ್ದೇಶಕರು ಪ್ರಕಾಶ್, ಮಧುರ, ಎಲ್.ಎನ್.ಶಾಸ್ತ್ರಿ. ಕುಡ್ಲ ಸಾಯಿಕೃಷ್ಣ ಹಾಗೂ ಕೀರ್ತನ್ ಭಂಡಾರಿ ಸಾಹಿತ್ಯ ಒದಗಿಸಿದ್ದಾರೆ. ಹಲವು ಪ್ರಥಮಗಳನ್ನು ಹೊಂದಿರುವ ತುಳು ಹಾಸ್ಯಚಿತ್ರ ‘ಡೊಂಬರಾಟ’ ನೂತನ ದಾಖಲೆ ಮಾಡುವ ನಿರೀಕ್ಷೆ ನಮಗಿದೆ ಎಂದು ನಿರ್ಮಾಪಕ ರಾಜೇಶ್ ಬ್ರಹ್ಮಾವರ ತಿಳಿಸಿದರು.
ಕರ್ನಾಟಕ ಮಾತ್ರವಲ್ಲದೇ ನೆರೆಯ ರಾಜ್ಯ ಹಾಗೂ ವಿದೇಶಗಳಲ್ಲೂ ಚಿತ್ರವನ್ನು ಬಿಡುಗಡೆಮಾಡುವ ಯೋಜನೆ ಇದೆ ಎಂದು ನಿರ್ಮಾಪಕರು ಹಾಗೂ ನಿರ್ದೇಶಕರು ತಿಳಿಸಿದರು.







