ಪರಸ್ಪರರ ಪತ್ನಿಯರಿಗೆ ಕಿಡ್ನಿ ನೀಡಿ ಪ್ರಾಣ ಉಳಿಸಿದ ಹಿಂದೂ - ಮುಸ್ಲಿಂ ಗಂಡಂದಿರು!

ಜೈಪುರ, ಸೆ.12 : ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಎರಡು ಕಿಡ್ನಿ (ಮೂತ್ರಕೋಶ) ಗಳ ಕಸಿ ನಡೆಯಿತು. ಆದರೆ ಇದರಲ್ಲೊಂದು ವಿಶೇಷತೆಯಿದೆ. ಅದೇನೆಂದರೆ, ಒಂದು ಕಿಡ್ನಿಯನ್ನು ಹಿಂದೂ ವ್ಯಕ್ತಿಯೊಬ್ಬರು ಮುಸ್ಲಿಂ ಮಹಿಳೆಗೆ ನೀಡಿದರೆ, ಆ ಮುಸ್ಲಿಂ ಮಹಿಳೆಯ ಪತಿ ತನ್ನ ಒಂದು ಕಿಡ್ನಿಯನ್ನು ಆ ಹಿಂದೂ ವ್ಯಕ್ತಿಯ ಪತ್ನಿಗೆ ನೀಡಿದರು !
ಹಸನಪುರ ನಿವಾಸಿ ಅನಿತಾ ಮೆಹ್ರಾ ಅವರು ಕೆಲವು ವರ್ಷಗಳಿಂದ ಕಾಯಿಲೆಯೊಂದರಿಂದ ಬಳಲುತ್ತಿದ್ದು ಇದೀಗ ಅದರ ಪರಿಣಾಮದಿಂದ ಅವರ ಮೂತ್ರಪಿಂಡ ವೈಫಲ್ಯಗೊಂಡಿತ್ತು . ಅಜ್ಮೀರೀ ಗೇಟ್ ನಿವಾಸಿ ತಸ್ಲೀಮ್ ಜಾನ್ ಅವರ ಮೂತ್ರ ಪಿಂಡವೂ ವಿಫಲವಾಗಿ ಅವರು ಮೆಹ್ರಾ ಇದ್ದ ಆಸ್ಪತ್ರೆಯಲ್ಲೇ ದಾಖಲಾಗಿದ್ದರು.
ಅನಿತಾ ಅವರ ರಕ್ತದ ಗುಂಪು ಬಿ ಪಾಸಿಟಿವ್ ಆದರೆ, ತಸ್ಲೀಮ್ ಅವರದು ಎ ಪಾಸಿಟಿವ್ ಆಗಿತ್ತು. ಇಬ್ಬರು ಚಿಕಿತ್ಸೆಗೆ ಬಂದಾಗ ಅವರ ಗಂಡಂದಿರ ರಕ್ತದ ಗುಂಪು ಪರೀಕ್ಷಿಸಿದ ವೈದ್ಯರಿಗೆ ಒಂದು ವಿನೂತನ ಉಪಾಯ ಹೊಳೆಯಿತು. ಕಾರಣ ಅನಿತಾ ಅವರ ಪತಿ ವಿನೋದ್ ಮೇಹ್ರಾ ಅವರ ರಕ್ತದ ಗುಂಪು ಎ ಪಾಸಿಟಿವ್ ಇದ್ದರೆ, ತಸ್ಲೀಮ್ ಅವರ ಪತಿ ಅನ್ವರ್ ಅಹ್ಮದ್ ಅವರದು ಬಿ ಪಾಸಿಟಿವ್ ಆಗಿತ್ತು.
ವೈದ್ಯರು ಅವರಿಗೆ ನೀವು ನಿಮ್ಮ ಮೂತ್ರ ಪಿಂಡಗಳನ್ನು ಪರಸ್ಪರ ನೀಡಿ ಎಂದು ವಿವರವಾಗಿ ತಿಳಿಸಿ,ಮನವರಿಕೆ ಮಾಡಿದಾಗ ಇಬ್ಬರು ತಕ್ಷಣವೇ ಒಪ್ಪಿಕೊಂಡರು. ವಿನೋದ್ ತನ್ನ ಒಂದು ಮೂತ್ರಪಿಂಡವನ್ನು ತಸ್ಲೀಮಾ ಅವರಿಗೆ ನೀಡಿದರೆ, ಅನಿತಾ ಅವರಿಗೆ ಅನ್ವರ್ ತನ್ನ ಒಂದು ಮೂತ್ರಪಿಂಡ ನೀಡಿದರು. ಮಾನವ ಅಂಗಾಂಗ ಕಸಿ ಕಾನೂನಿನ ಪ್ರಕಾರ ಕೇವಲ ಸಮೀಪ ಸಂಬಂಧಿಗಳು ಮಾತ್ರ ಒಬ್ಬರಿಗೊಬ್ಬರು ಕಿಡ್ನಿ ದಾನ ಮಾಡಬಹುದು. ಆದರೆ ಪರಸ್ಪರ ಬದಲಾವಣೆ ಮಾಡಲು ಅಡ್ಡಿಯಿಲ್ಲ. ಹಾಗಾಗಿ ಇವರಿಗೆ ಕಾನೂನಿನ ತೊಡಕೂ ಬರಲಿಲ್ಲ.
ಮೂತ್ರ ಪಿಂಡ ಶಾಸ್ತ್ರಜ್ಞ ಡಾ. ಆಶುತೋಷ್ ಸೋನಿ ಅವರ ಪ್ರಕಾರ, ಶೆ.90 ರಷ್ಟು ಪ್ರಕರಣಗಳಲ್ಲಿ ಮಹಿಳೆಯರು ದಾನಿಗಳಾಗಿರುತ್ತಾರೆ . ಆದರೆ ಇಲ್ಲಿ ಪುರುಷರು ದಾನಿಗಳಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಬೆಂಗಳೂರಿನಲ್ಲಿ ಇಬ್ಬರು ಮಹಿಳೆಯರು ತಮ್ಮ ಮೂತ್ರಪಿಂಡವನ್ನು ಪರಸ್ಪರ ಗಂಡಂದಿರಿಗೆ ನೀಡಿದ್ದರು ಎಂದು ವರದಿಯಾಗಿತ್ತು.
“ನಾನು ಬಕ್ರೀದ್ ನ್ನು ತುಂಬಾ ಸಂತಸದಿಂದ ಆಚರಿಸುವಂತೆ ಆಗಿದೆ. ವೀನೋದ್ ಮೇಹ್ರಾ ನನ್ನ ಹೆಂಡತಿಗೆ ಮೂತ್ರಪಿಂಡ ನೀಡಿದ್ದು, ಅವರಿಗೆ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಈಗ ನನ್ನ ಹೆಂಡತಿ ಚೇತರಿಸಿಕೊಳ್ಳುತ್ತಿದ್ದಾಳೆ. ನಾವು ವಿನೋದ್ ಅವರನ್ನು ಗೌರವಿಸುತ್ತೇನೆ'' ಎಂದು ಅನ್ವರ್ ಅಹ್ಮದ್ ಹರ್ಷ ವ್ಯಕ್ತಪಡಿಸಿದ್ದಾರೆ.
ಅದಕ್ಕೆ ಪ್ರತಿಕ್ರಿಯೆ ನೀಡಿರುವ ವಿನೋದ್, "ಇದು ನನಗೆ ದೀಪಾವಳಿ ಹಬ್ಬಕ್ಕಿಂತ ಕಡಿಮೆ ಖುಷಿಯಲ್ಲ " ಎಂದಿದ್ದಾರೆ.
ಸೆ.2 ರಂದು ಮೂತ್ರಪಿಂಡಗಳನ್ನು ಕಸಿ ಮಾಡಲಾಗಿತ್ತು. ದಾನ ಮಾಡಿದ ಪತಿಯಂದಿರು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು , ಸೆ.12 ರಂದು ಕಿಡ್ನಿ ಪಡೆದ ಪತ್ನಿಯರು ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ.







