ಸೆ.14ರಂದು ಬಿಜೆಪಿ ರೈತಮೋರ್ಚಾದಿಂದ ಧರಣಿ
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
ಮಂಗಳೂರು, ಸೆ.12:ಅಂತರ್ಜಲ ಕುಸಿತ ತಡೆಯಲು ಕಿಂಡಿ ಅಣೆಕಟ್ಟುಗಳಿಗೆ ಸಕಾಲದಲ್ಲಿ ಹಲಗೆ ಹಾಕಲು ವ್ಯವಸ್ಥೆ, ಕಳೆದ ಎಂಟು ತಿಂಗಳಿಂದ ಬಾಕಿ ಉಳಿದಿರುವ ಹಾಲು ಉತ್ಪಾದಕರ ಸಹಾಯಧನ ತಕ್ಷಣ ಬಿಡುಗಡೆ ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ರೈತ ಮೋರ್ಚಾ ವತಿಯಿಂದ ಸೆ. 14 ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೆಳಗ್ಗೆ 11 ಗಂಟೆಗೆ ಧರಣಿ ನಡೆಯಲಿದೆ ಎಂದು ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ರಾಜೀವ ಭಂಡಾರಿ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲು ಉತ್ಪಾದಕರ ಸಹಾಯಧನ ಪ್ರತೀ ಲೀಟರ್‌ಗೆ 4 ರೂ.ನಂತೆ ಕಳೆದ 8 ತಿಂಗಳಿಂದ ಒಟ್ಟು ಸುಮಾರು 300 ಕೋಟಿ ಬಾಕಿ ಇದ್ದು, ಇದನ್ನು ಫಲಾನುಭವಿ ರೈತರಿಗೆ ತಕ್ಷಣ ಒದಗಿಸಬೇಕು. ಕಳೆದ ಆರು ತಿಂಗಳಿಂದ ಪಶು ಆಹಾರ ದರ ಚೀಲಕ್ಕೆ 250 ರೂ. ಏರಿಕೆಯಾಗಿದ್ದು, ಇದನ್ನು ಇಳಿಸಬೇಕು ಎಂದವರು ಒತ್ತಾಯಿಸಿದರು.
ತೆಂಗು ಮತ್ತು ರಬ್ಬರ್ ಬೆಳೆಗೆ ತಕ್ಷಣದಿಂದ ಬೆಂಬಲ ಬೆಲೆಯನ್ನು ರಾಜ್ಯವ್ಯಾಪಿ ಘೋಷಿಸಬೇಕು. ಉಡುಪಿ ಮತ್ತು ತುಮಕೂರಿನಲ್ಲಿ ತೆಂಗಿಗೆ ಬೆಂಬಲ ಬೆಲೆ ನೀಡಲಾಗುತ್ತಿದೆ ಎಂದವರು ಹೇಳಿದರು.
ಸಹಕಾರ ಸಂಘಗಳಿಂದ ಸಾಲ ಪಡೆದ ರೈತರಿಗೆ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ 450 ಕೋಟಿ ರೂ. ಮೊತ್ತವನ್ನು ಸಂಬಂಧಪಟ್ಟ ಸಾಲಗಾರ ಫಲಾನುಭವಿಗಳ ಖಾತೆಗೆ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ ಗಟ್ಟಿ, ಬಾಲಕೃಷ್ಣ ಬಾಣಜಾಲು, ಗುರುಚರಣ್ ಮತ್ತು ಅವಿಕ್ಷಿತ್ ಉಪಸ್ಥಿತರಿದ್ದರು.







