ರಿಯೋದಲ್ಲಿ ಬೆಳಗಿದ ದೀಪಾ
ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಪ್ರತಿಭೆ

ಹೊಸದಿಲ್ಲಿ , ಸೆ. 12 : ರಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಷಾಟ್ಪುಟ್ ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಭಾರತದ ದೀಪಾ ಮಲಿಕ್ ಇತಿಹಾಸ ನಿರ್ಮಿಸಿದ್ದಾರೆ. ಆಕೆ ಪ್ಯಾರಾಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ ಪ್ರಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದರೊಂದಿಗೆ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪದಕಗಳ ಸಂಖ್ಯೆ ಮೂರಕ್ಕೇರಿದೆ.
ಆರು ಪ್ರಯತ್ನಗಳಲ್ಲಿ 4.61 ಮೀಟರ್ ದೂರದ ಎಸೆತ ದೀಪಾ ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಈ ಮೂಲಕ ದೀಪಾ ಹರ್ಯಾಣ ಸರಕಾರದ ಕ್ರೀಡಾ ಯೋಜನೆಯನ್ವಯ 4 ಕೋಟಿ ರೂಪಾಯಿ ಬಹುಮಾನ ಪಡೆಯಲಿದ್ದಾರೆ. ಬಹರೈನ್ ನ ಫಾತಿಮಾ ನಿಧಾಮ್ ಚಿನ್ನ ಗೆದ್ದರೆ, ಗ್ರೀಸ್ ನ ದಿಮಿಟ್ರಾ ಕಂಚು ಪಡೆದರು.
ದೀಪ ಸೊಂಟದ ಕೆಳಗೆ ಬಲವಿಲ್ಲದ (ಪಾರ್ಶ್ವವಾಯು) ವರು. ಸೇನಾಧಿಕಾರಿಯೊಬ್ಬರ ಪತ್ನಿಯಾಗಿರುವ ದೀಪ ಇಬ್ಬರು ಮಕ್ಕಳ ತಾಯಿ.
ಬೆನ್ನು ಮೂಳೆಯ ಟ್ಯೂಮರ್ ನಿಂದಾಗಿ 17 ವರ್ಷಗಳ ಹಿಂದೆ ದೀಪಾ ನಡೆಯಲು ಸಾಧ್ಯವಿಲ್ಲದಂತಾದರು. ಇದಕ್ಕಾಗಿ ಆಕೆಗೆ 31 ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಆಕೆಯ ಸೊಂಟ ಹಾಗು ಕಾಲುಗಳ ನಡುವೆ 183 ಹೋಲಿಗೆ ಹಾಕಲಾಗಿತ್ತು.
ಬಹುಮುಖ ಪ್ರತಿಭೆಯಾಗಿರುವ ದೀಪಾ, ಜಾವ್ಲಿನ್ ಹಾಗು ಈಜು ಸ್ಪರ್ಧೆಯಲ್ಲೂ ಭಾಗವಹಿಸಿದ್ದರು.







