ಬೆಂಗಳೂರಿನ 9 ಠಾಣೆಗಳ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ

ಬೆಂಗಳೂರು, ಸೆ.12: ಕಾವೇರಿ ಜಲವಿವಾದ ಕುರಿತು ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ವಿರೋಧಿಸಿ ಬೆಂಗಳೂರಿನಾದ್ಯಂತ ಅಹಿತಕರ ಘಟನೆಗಳು ನಡೆದಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ 9 ಠಾಣೆಗಳ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ.
ಬೆಂಗಳೂರಿನ ರಾಜಗೋಪಾಲನಗರ, ವಿಜಯನಗರ, ಕಾಮಾಕ್ಷಿಪಾಳ್ಯ, ಬ್ಯಾಟರಾಯನಪುರ, ಕೆಂಗೇರಿ, ರಾಜಾಜಿನಗರ, ಮಾಗಡಿ ರಸ್ತೆ, ರಾಜರಾಜೇಶ್ವರಿ ನಗರ, ಕೆ.ಪಿ. ಅಗ್ರಹಾರ, ಚಂದ್ರಾ ಲೇಔಟ್, ಯಶವಂತಪುರ, ಮಹಾಲಕ್ಷ್ಮೀನಗರ, ಪೀಣ್ಯ, ಆರ್ ಎಂಸಿ ಯಾರ್ಡ್, ನಂದಿನಿ ಲೇಔಟ್, ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಮೇಘರಿಕ್ ಆದೇಶ ಹೊರಡಿಸಿದ್ದಾರೆ ಎಂದು ಪೊಲೀಸ್ ಪ್ರಧಾನ ಕಚೇರಿ ಐಜಿಪಿ ಉಮೇಶ್ ಕುಮಾರ್ ತಿಳಿಸಿದ್ದಾರೆ.
ಕರ್ಫ್ಯೂ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅರೆಸೇನಾ ತುಕಡಿಗಳನ್ನು ಆಯಕಟ್ಟಿನ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಕರ್ಫ್ಯೂ ಬಗ್ಗೆ ಜನರು ಎಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ.





