ಬೆಳ್ತಂಗಡಿ: ಯುವವಾಹಿನಿ ಘಟಕದ ಪದಗ್ರಹಣ
ಬೆಳ್ತಂಗಡಿ, ಸೆ.12: ಯಾವುದೇ ಸಮಾಜದಲ್ಲಾಗಲಿ ಶಿಕ್ಷಣ ಹಾಗೂ ಯುವ ಜನತೆಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಸಮಾಜ ಅಭಿವೃದ್ಧಿಯಾಗುತ್ತದೆ. ಇಂದು ಬಿಲ್ಲವ ಸಮಾಜದ ಯುವವಾಹಿನಿ ಯಂತಹ ಸಂಘಟನೆಗಳು ಬಿಲ್ಲವ ಸಮಾಜದ ಬಂಧುಗಳಿಗೆ ಶಿಕ್ಷಣ ಹಾಗೂ ಯುವ ಜನತೆಗೆ ಮಾರ್ಗದರ್ಶನ ನೀಡುವ ದೊಡ್ಡ ಕಾರ್ಯ ಮಾಡುತ್ತಿದ್ದು ಇದು ಸಂಘ ಸಂಸ್ಥೆಗಳು ಮಾಡಬೇಕಾದ ಅತೀ ದೊಡ್ಡ ಕೆಲಸವಾಗಿದೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದ್ದಾರೆ.
ಅವರು ರವಿವಾರ ಬೆಳ್ತಂಗಡಿ ಸಂತೆಕಟ್ಟೆ ಸುವರ್ಣ ಆರ್ಕೆಡ್ ಸಬಾ ವನದಲ್ಲಿ ನಡೆದ ಯುವವಾಹಿನಿ ರಿ. ಬೆಳ್ತಂಗಡಿ ಘಟಕ ಇದರ 2016-17ನೇ ಸಾಲಿನ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದು ಉಡುಪಿ ಹಾಗೂ ದ.ಕ. ಜಿಲ್ಲೆಯಲ್ಲಿ ಬಿಲ್ಲವ ಸಮಾಜ ಅತೀ ಹೆಚ್ಚು ಸಂಖ್ಯೆಯಲ್ಲಿದ್ದು ಇದರಿಂದಾಗಿ ಶಿಕ್ಷಣ ಹಾಗೂ ಯುವಕರಿಗೆ ಮಾರ್ಗದರ್ಶನ ಕೊರತೆ ಕಾಣುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ಪಕ್ಷ ಸಂಘಟನೆಗಳಲ್ಲಿ ಗುರುತಿಸಿಕೊಂಡ ಬಿಲ್ಲವ ಯುವಕರೇ ಹೊಡೆದಾಟ ಬಡಿದಾಟದಲ್ಲಿ ಕಾಣುತ್ತಿದ್ದು ಬಿಲ್ಲವ ಯುವಕರೇ ಸಾವನ್ನಪ್ಪುತ್ತಿರುವುದು ಅತ್ಯಂತ ಬೇಸರದ ವಿಷಯ ಇದನ್ನು ನಿಯಂತ್ರಿಸಲು ಯುವ ವಾಹಿನಿಯಂತಹ ಘಟಕ ಎತ್ತರಕ್ಕೆ ಬೆಳೆದು ಬಿಲ್ಲವ ಸಮಾಜವನ್ನು ಸರಿದಾರಿಗೆ ತರುವ ಕಾರ್ಯವಾಡಬೇಕು ಎಂದರು.
ನಿವೃತ್ತ ಎಸ್.ಪಿ. ಪಿತಾಂಬರ ಹೆರಾಜೆ ಬಿ. ತಮ್ಮಯ್ಯ ಇವರ 10ನೆ ತುಳುಲಿಪಿ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಬಿಲ್ಲವ ಸಮಾಜದ ಯುವಕರನ್ನು ಗುರುತಿಸುವ ಕಾರ್ಯ ಯುವವಾಹಿನಿ ಮಾಡುತ್ತಿದ್ದು ಇದು ತಾಲೂಕಿಗೆ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಗಳನ್ನು ಯುವವಾಹಿನಿ ಮುಂದುವರೆಸಬೇಕು ಎಂದರು.
ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ರಿ. ಬೆಳ್ತಂಗಡಿ ಇದರ ಅಧ್ಯಕ್ಷ ಸಂಪತ್ ಬಿ.ಸುವರ್ಣ ಮಾತನಾಡಿ, ಸಂಘಟನೆಗಳು ಬೆಳೆಯುವುದು ತಪ್ಪಲ್ಲ ಬಿಲ್ಲವ ಮನಸ್ಸುಗಳನ್ನು ಒಂದುಗೂಡಿಸುವ ಯುವವಾಹಿನಿಯಂತಹ ಸಂಘಟನೆ ಶೈಕ್ಷಣಿಕ ಕ್ರಾಂತಿ ಮೂಡಿಸುವ ಮೂಲಕ ವಿಷ್ಯದಲ್ಲಿ ಬಿಲ್ಲವ ಸಮಾಜ ಸಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅತೀ ಉನ್ನತ ಮಟ್ಟದಲ್ಲಿ ಬೆಳೆಯಲು ಸಹಕಾರಿಯಾಗಲಿದೆ. ರಾಜಕೀಯ ಕ್ಷೇತ್ರದಲ್ಲಿ ವಿರೋಧಿಗಳಾಗಿದ್ದರೂ ಸಮಾಜದ ನೆಲೆಯಲ್ಲಿ ಸಹಬಾಗಿಗಳಾಗಬೇಕು. ಯುವಕರು ಪ್ರಗತಿಂು ಮನಸ್ಥೈರ್ಯವನ್ನು ಬೆಳೆಸಿಕೊಂಡಾಗ ಉನ್ನತ ಸಾಧನೆಗೈಯಬಹುದು ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ ಹಾಗೂ ಪರಿಹಾರ ಧನ ವಿತರಿಸಲಾಯಿತು. ಯುವವಾಹಿನಿ ರಿ. ಕೇಂದ್ರ ಸಮಿತಿ ಉಪಾಧ್ಯಕ್ಷ ಯಶವಂತ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಕೇಂದ್ರ ಸಮಿತಿ ಸಲಹೆಗಾರ ಬಿ.ತಮ್ಮಯ್ಯ, ಬೆಳ್ತಂಗಡಿ ಗು.ನಾ.ಸ್ವಾ. ಸೇವಾ ಸಂಘದ ಮಾಜಿ ಉಪಾಧ್ಯಕ್ಷ ಮಹೇಶ್ ಕುಮಾರ್ ನಡಕ್ಕರ, ಬೆಳ್ತಂಗಡಿ ಯುವ ವಾಹಿನಿ ಘಟಕದ ಸ್ಥಾಪಕಾಧ್ಯಕ್ಷ ರಾಕೇಶ್ ಮೂಡುಕೋಡಿ, ಅಧ್ಯಕ್ಷ ಯೋಗೀಶ್ ಕುಮಾರ್, ನೂತನ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಉಪಸ್ಥಿತರಿದ್ದರು.
ಯುವವಾಹಿನಿ ಘಟಕದ ನಿರ್ದೇಶಕ ಅಶ್ವಥ್ ಸ್ವಾಗತಿಸಿದರು. ಸ್ಮಿತೇಶ್ ಎಸ್ ಬಾರ್ಯ ಪ್ರಾಸ್ತಾವಿಕವಾಗಿ ಮಾತನಡಿದರು. ಚಂದ್ರಹಾಸ ಬಳಂಜ, ಅನೀಶ್ ವೇಣೂರು ನಿರೂಪಿಸಿ ರಾಕೇಶ್ ಮೂಡುಕೋಡಿ ವಂದಿಸಿದರು







