ಬಕ್ರೀದ್‌ನಂದೇ ಫ್ಲೋರಿಡಾದಲ್ಲಿ ಮಸೀದಿಗೆ ಬೆಂಕಿ

ಫ್ಲೋರಿಡಾ, ಸೆ.13: ಬಕ್ರೀದ್ ಹಬ್ಬದ ದಿನವೇ ಅಮೆರಿಕದ ಫ್ಲೋರಿಡಾದಲ್ಲಿ ಮಸೀದಿಯೊಂದಕ್ಕೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ದ್ವೇಷದ ಕಾರಣದಿಂದ ಈ ಕೃತ್ಯ ಎಸಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಒರ್ಲಾಂಡೊ ನಗರದಿಂದ ಸುಮಾರು 160 ಕಿಲೋಮೀಟರ್ ದೂರದಲ್ಲಿರುವ ಫೋರ್ಟ್ ಪೀರ್ಸ್ ಇಸ್ಲಾಮಿಕ್ ಸೆಂಟರ್‌ನಿಂದ ಸೋಮವಾರ ಬೆಂಕಿಯ ಜ್ವಾಲೆ ಕಾಣಿಸಿಕೊಂಡ ಮಾಹಿತಿ ಲಭಿಸಿದ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದರು. ಯಾರಿಗೂ ಗಾಯಗಳಾಗಿಲ್ಲ ಮತ್ತು ಹಾನಿ ವಿವರಗಳು ತಕ್ಷಣಕ್ಕೆ ತಿಳಿದುಬಂದಿಲ್ಲ.
ಬಕ್ರೀದ್ ಹಬ್ಬ ಇಸ್ಲಾಂ ಸಂಪ್ರದಾಯದವರ ಅತ್ಯಂತ ಪವಿತ್ರ ಹಬ್ಬವಾಗಿದ್ದು, ಇದರ ಆಚರಣೆ, ದಾಳಿಕೋರರ ಕೆಂಗಣ್ಣಿಗೆ ಕಾರಣವಿರಬಹುದು ಎಂದು ಸೆಂಟ್ ಲೈಯಿಸ್ ಕಂಟ್ರಿ ಶೆರೀಫ್ಸ್ ಕಚೇರಿಯ ಮೇಜರ್ ಡೇವಿಡ್ ಥಾಮ್ಸನ್ ಪ್ರತಿಕ್ರಿಯಿಸಿದ್ದಾರೆ. ಇದು ದ್ವೇಷದಿಂದ ನಡೆಸಿದ ಕೃತ್ಯವೇ ಎನ್ನುವುದು ಇನ್ನೂ ಖಚಿತವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸೆಪ್ಟೆಂಬರ್ 11ರ ಘಟನೆಯ 15ನೆ ವರ್ಷಾಚರಣೆ ಸಂಬಂಧ ಈ ದಾಳಿ ನಡೆದಿದೆಯೇ ಎಂಬ ಬಗ್ಗೆಯೂ ತನಿಖೆ ನಡೆದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.





