ಧಾರ್ಮಿಕ ಸ್ಥಳಕ್ಕೆ ‘ಅಗೌರವ’ ತೋರಿಸಿದ ಆರೋಪಿ, ಮಾನಸಿಕ ಅಸ್ವಸ್ಥೆಯ ಬರ್ಬರ ಕೊಲೆ

ಅಮೃತಸರ್, ಸೆ.13: ಕಳೆದ ವರ್ಷ ಗುರುದ್ವಾರವೊಂದಕ್ಕೆ ಚಪ್ಪಲಿ ಧರಿಸಿ ಪ್ರವೇಶಿಸಿ ಅಗೌರವ ತೋರಿಸಿದ ಆರೋಪದ ಮೇಲೆ ಐಪಿಸಿಯ ಸೆಕ್ಷನ್ 295ಎ, 505, 511 ಅನ್ವಯ ಪ್ರಕರಣ ಎದುರಿಸುತ್ತಿದ್ದ ಹಾಗೂ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ ಮಾನಸಿಕ ಅಸ್ವಸ್ಥ ಕ್ರೈಸ್ತ ಮಹಿಳೆಯೊಬ್ಬಳನ್ನು ವೆರೋಕೆ ಗ್ರಾಮದ ಅವಳ ಮನೆಯ ಎದುರು ಅಪರಿಚಿತ ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದಿದ್ದಾರೆ.
ಘಟನೆ ನಡೆದಾಗ ಬಲ್ವಿಂದರ್ ಕೌರ್ ಎಂಬ ಹೆಸರಿನ ಈ ಮಹಿಳೆಯ ಪತಿ ಲಭ್ ಮಾಸಿಹ್ ಮನೆಯೊಳಗಿದ್ದಿರೂ, ಮದ್ಯವ್ಯಸನಿಯಾಗಿದ್ದ ಆತ ತನ್ನ ಪತ್ನಿಯ ಕೂಗನ್ನು ಕೇಳಿದ ಹೊರತಾಗಿಯೂ ಮನೆಯೊಳಗೆ ಅಡಗಿ ಕುಳಿತಿದ್ದ. ಹಿಂದೊಮ್ಮೆ ವಿದ್ಯುದಾಘಾತಕ್ಕೆ ಒಳಗಾದ ನಂತರ ಬಲ್ವಿಂದರ್ ಮಾನಸಿಕವಾಗಿ ಅಸ್ವಸ್ಥಳಾಗಿದ್ದಳೆಂದು ತಿಳಿದು ಬಂದಿದ್ದು, ಇದೇ ಕಾರಣದಿಂದ ಆಕೆ ಕಳೆದ ವರ್ಷ ಗುರುದ್ವಾರ ಬಾಬೆ ದಿ ಬೀರ್ ಸಾಹೇಬ್ ಗೆ ಭೇಟಿ ನೀಡುವಾಗ ಅರಿಯದೆಯೇ ಚಪ್ಪಲಿ ಧರಿಸಿದ್ದಳೆಂದು ತಿಳಿದು ಬಂದಿದೆ.
ದುಷ್ಕರ್ಮಿಗಳು ಆಕೆಯ ಮೇಲೆ ದಾಳಿ ನಡೆಸಿ ಪರಾರಿಯಾದಾಗ ತನ್ನ ತೀವ್ರ ಗಾಯಗಳ ಹೊರತಾಗಿಯೂ ಬಲ್ವಿಂದರ್ ನೆಲದಲ್ಲಿ ತೆವಳಿಕೊಂಡು ತನ್ನ ಮೊಮ್ಮಗಳು ಮಲಗಿದ್ದೆಡೆ ಬಂದು ಆಕೆಯ ಮುಖಾಂತರ ತನ್ನ ಪತಿಯನ್ನು ಎಬ್ಬಿಸಲು ಪ್ರಯತ್ನಿಸಿದರೂ ಅದು ವಿಫಲವಾಗಿತ್ತು. ನಾಲ್ಕು ಗಂಟೆಗಳ ತರುವಾಯ ತೀವ್ರ ರಕ್ತಸ್ರಾವದಿಂದ ಆಕೆ ಕೊನೆಯುಸಿರೆಳೆದಿದ್ದಳು.
ಆಕೆ ಗುರುದ್ವಾರಕ್ಕೆ ಅವಮಾನ ಮಾಡಿದ್ದಳೆಂಬ ಕಾರಣಕ್ಕೆ ಕೆಲ ಸಿಖ್ ತೀವ್ರಗಾಮಿಗಳು ಆಕೆಯ ಮೇಲೆ ದಾಳಿ ನಡೆಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದುಷ್ಕರ್ಮಿಗಳು ಆಕೆಯ ಮೊಣಕಾಲಿನ ಕೆಳಗೆ ಮಾತ್ರ ಹೊಡೆದಿದ್ದಾರೆಂದು ತಿಳಿದು ಬಂದಿದೆ. ಕನಿಷ್ಠ ಮೂರು ಮಂದಿ ಈ ಕೊಲೆಯಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ.
ದುಷ್ಕರ್ಮಿಗಳು ರವಿವಾರ ಮಧ್ಯ ರಾತ್ರಿ ಕಳೆದ ಮೇಲೆ ಆಕೆಯ ಮನೆಯ ಬಾಗಿಲು ತಟ್ಟಿದ್ದು ಆಕೆ ಬಾಗಿಲು ತೆರೆದಾಗ ಆಕೆಯ ಮೇಲೆ ದಾಳಿ ನಡೆಸಿದ್ದರು.







