ಆರೆಸ್ಸೆಸ್ ನ ಮುಸ್ಲಿಂ ರಾಷ್ಟ್ರೀಯ ಮಂಚ್ ಖುರ್ಬಾನಿ ನೀಡುವುದು ಹೇಗೆ ಗೊತ್ತೇ ?
ಇದು ಬಹಳ ಮಜವಾಗಿದೆ

ಅವಧ್, ಸೆ.13: ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂಯೋಜಿತ ಮುಸ್ಲಿಂ ರಾಷ್ಟ್ರೀಯ ಮಂಚ್ ನ ಅವಧ್ ಘಟಕವು ಬಕ್ರೀದ್ ಪ್ರಯುಕ್ತ ಇಂದು ತನ್ನ ಲಖನೌ ಕಚೇರಿಯಲ್ಲಿ 5 ಕೆಜಿ ತೂಕದ ಆಡಿನ ಆಕೃತಿಯ ಕೇಕ್ ಕತ್ತರಿಸಿ ಖುರ್ಬಾನಿ ನೀಡಲಿದೆಯೆಂಬ ಕುತೂಹಲಕಾರಿ ಮಾಹಿತಿ ಹೊರ ಬಿದ್ದಿದೆ. ಆದರೆ ಮುಸ್ಲಿಂ ಮಂಚ್ ಇದರ ರಾಷ್ಟ್ರೀಯ ಸಂಚಾಲಕ ಮುಹಮ್ಮದ್ ಅಫ್ಜಲ್ ತಮಗೆ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲವೆಂದು ಹೇಳಿದ್ದಾರೆ.
ತಮ್ಮ ಮನೆಗಳಲ್ಲಿ ಬಿರಿಯಾನಿ ತಯಾರಿಸಿ ಉಣಬಡಿಸುವ ಪದ್ಧತಿಯನ್ನು ಕೂಡ ಮಂಚ್ ಸದಸ್ಯರು ಕೈಬಿಡಲು ನಿರ್ಧರಿಸಿದ್ದು ಅದರ ಬದಲು ತಮ್ಮ ಮನೆಗಳಿಗೆ ಭೇಟಿ ನೀಡುವ ಸ್ನೇಹಿತರು ಹಾಗೂ ಹಿತೈಷಿಗಳಿಗೆ ಸೇಮಿಗೆ ಹಾಗೂ ದಹಿ ವಡಾ ನೀಡಲು ತೀರ್ಮಾನಿಸಿದ್ದಾರೆ.
‘‘ಜನರು ತಮ್ಮ ಹುಟ್ಟುಹಬ್ಬಗಳಂದು ಮಾಡುವ ಹಾಗೆ ಬಕ್ರೀದ್ ದಿನದಂದೂ ಕೇಕ್ ಕತ್ತರಿಸಬಹುದು’’ಎಂದು ಮುಸ್ಲಿಂ ಮಂಚ್ ರಾಷ್ಟ್ರೀಯ ಸಂಚಾಲಕ ರಾಯೀಸ್ ಖಾನ್ ಹೇಳಿದ್ದಾರೆ. ಈ ಪದ್ಧತಿಗೆ ಉತ್ತಮ ಪ್ರತಿಕ್ರಿಯೆ ದೊರೆತರೆ ಅದನ್ನು ಮುಂದುವರಿಸಿಕೊಂಡು ಹೋಗುವುದಾಗಿಯೂ ಅವರು ಹೇಳಿದ್ದಾರೆ.
‘‘ಬಕ್ರೀದ್ ಮಾನವೀಯತೆಯ ಸಂದೇಶವನ್ನು ಸಾರುವ ಹಬ್ಬ. ಆದರೆ ಈ ಸಂದರ್ಭ ಆಡನ್ನು ಯಾವುದೇ ಕಾರಣವಿಲ್ಲದೆ ಬಲಿ ನೀಡಿ ಅದರ ಮಾಂಸ ತಿನ್ನುವುದು ಸರಿಯಲ್ಲ’’ ಎಂದು ಮುಸ್ಲಿಂ ಮಂಚ್ ಇದರ ಸಹ ಸಂಚಾಲಕ ಹಸನ್ ಕೌಸರ್ ಹೇಳಿದ್ದಾರೆ.







