ಕಾವೇರಿ ಗಲಭೆ: ಕೇರಳಕ್ಕೆ ಹೆಚ್ಚು ರೈಲುಗಳನ್ನು ಒದಗಿಸಲು ವಿನಂತಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ತಿರುವನಂತಪುರಂ,ಸೆಪ್ಟಂಬರ್ 13: ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಗಲಭೆ ನಡೆಯುತ್ತಿರುವುದರಿಂದಾಗಿ ಕೇರಳೀಯರು ಊರಿಗೆ ತಲುಪಲು ಹೆಚ್ಚುವರಿರೈಲುಗಳ ವ್ಯವಸ್ಥೆ ಮಾಡಿಕೊಡಬೇಕೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ರೈಲ್ವೆಸಚಿವ ಸುರೇಶ್‌ಪ್ರಭು ಅವರನ್ನು ವಿನಂತಿಸಿದ್ದಾರೆಂದು ವರದಿಯಾಗಿದೆ.
ರಸ್ತೆಮಾರ್ಗವಾಗಿ ಸೌಲಭ್ಯವನ್ನು ಒದಗಿಸಬೇಕೆಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಪಿಣರಾಯಿ ವಿಜಯನ್ ವಿನಂತಿಸಿದ್ದರು. ಇದು ಹೆಚ್ಚು ಪ್ರಯೋಜಕವಾಗದ್ದರಿಂದಾಗಿ ಕಣ್ಣೂರು ಮತ್ತು ತಿರುವನಂತಪುರಂಗೆ ತಲಾ ಒಂದೊಂದು ವಿಶೇಷ ರೈಲನ್ನು ಓಡಿಸಬೇಕೆಂದು ಪಿಣರಾಯಿ ಸುರೇಶ್‌ಪ್ರಭು ಅವರನ್ನು ಆಗ್ರಹಿಸಿದ್ದಾರೆ. ಕೇರಳದಲ್ಲಿ ಓಣಂ ಹಬ್ಬ ನಡೆಯುತ್ತಿದ್ದು ಅವರು ಊರಿಗೆ ಬರುವಂತಾಗಲು ತುರ್ತಾಗಿ ವಿಶೇಷ ರೈಲು ಒದಗಿಸಬೇಕು. ಕಾವೇರಿ ಘರ್ಷಣೆ ತಾರಕಕ್ಕೇರಿರುವುದರಿಂದ ಕೇರಳದ ಬೇಡಿಕೆಯನ್ನು ಪರಿಗಣಿಸಲಾಗುವುದೆಂದು ರೈಲ್ವೆ ಸಚಿವರು ಭರವಸೆ ನೀಡಿದ್ದಾರೆ. ಜನರ ಸುರಕ್ಷೆ ಮತ್ತು ಶಾಂತಿಗಾಗಿ ಕ್ರಮಕೈಗೊಳ್ಳಬೇಕೆಂದು ಪಿಣರಾಯಿ ವಿಜಯನ್ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಈ ಸಂದರ್ಭದಲ್ಲಿ ಕೋರಿದ್ದಾರೆಂದು ವರದಿ ತಿಳಿಸಿದೆ.





