ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ : ಮೋದಿ

ಹೊಸದಿಲ್ಲಿ, ಅ.13: ಕಾವೇರಿ ನದಿ ನೀರು ವಿವಾದವನ್ನು ಬಗೆಹರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಬೇಕು ಎಂಬ ಅಭಿಪ್ರಾಯ ಎಲ್ಲಡೆ ಕೇಳಿ ಬರುತ್ತಿದ್ದರೆ ಪ್ರಧಾನಿ ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸದೆ ಸಮಸ್ಯೆಯ ನ್ನು ಮಾತುಕತೆಯ ಮೂಲಕ ಬಗೆಹರಿಸುವಂತೆ ಎರಡು ರಾಜ್ಯಗಳಿಗೆ ಮನವಿ ಮಾಡಿದ್ದಾರೆ.
ಆತ್ಮೀಯ ಸೋದರರೇ ಮತ್ತು ಸಹೋದರಿಯರೇ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಪರಿಸ್ಥಿತಿ, ನಿಜಕ್ಕೂ ದುಃಖಕರ.ಈ ಬೆಳವಣಿಗೆಗಳಿಂದ ನನಗೆ ವೈಯಕ್ತಿಕವಾಗಿ ನೋವಾಗಿದೆ. ಯಾವುದೇ ಸಮಸ್ಯೆಗೆ ಹಿಂಸಾಚಾರ ಪರಿಹಾರ ನೀಡುವುದಿಲ್ಲ. ಪ್ರಜಾಪ್ರಭುತ್ವದಲ್ಲಿ, ಸಂಯಮ ಮತ್ತು ಪರಸ್ಪರ ಮಾತುಕತೆಯಿಂದ ಪರಿಹಾರ ಪಡೆಯಲು ಸಾಧ್ಯ.
ಈ ವಿವಾದ ನ್ಯಾಯದ ಪರಿಧಿಯಲ್ಲಿ ಮಾತ್ರವೇ ಪರಿಹಾರವಾಗಲು ಸಾಧ್ಯ. ಕಾನೂನು ಉಲ್ಲಂಘನೆ ಸೂಕ್ತ ಪರ್ಯಾಯವಾಗುವುದಿಲ್ಲ. ಕಳೆದ ಎರಡು ದಿನಗಳಿಂದ ಆಗುತ್ತಿರುವ ಹಿಂಸಾಚಾರ ಮತ್ತು ಬೆಂಕಿ ಹಚ್ಚುವ ಪ್ರಕರಣಗಳು ಬಡವರಿಗೆ ಮತ್ತು ದೇಶದ ಆಸ್ತಿಗೆ ನಷ್ಟವನ್ನು ಮಾತ್ರವೇ ಉಂಟು ಮಾಡುತ್ತವೆ.
ಯಾವ ಯಾವಾಗ ದೇಶ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿದೆಯೋ, ಆಗ ಕರ್ನಾಟಕ ಮತ್ತು ತಮಿಳುನಾಡಿನ ಜನತೆ, ದೇಶಾದ್ಯಂತದ ಜನರಂತೆಯೇ ಪರಿಸ್ಥಿತಿಯನ್ನು ಸಂವೇದನಾಶೀಲವಾಗಿ ಒಗ್ಗೂಡಿ ಎದುರಿಸಿದ್ದಾರೆ. ಸಂವೇದನೆಯನ್ನು ಪ್ರದರ್ಶಿಸಿ ಮತ್ತು ನಿಮ್ಮ ನಾಗರಿಕ ಜವಾಬ್ದಾರಿಯನ್ನು ನಿಮ್ಮ ಗಮನದಲ್ಲಿಟ್ಟುಕೊಳ್ಳಿ ಎಂದು ನಾನು ಎರಡೂ ರಾಜ್ಯಗಳ ಜನತೆಗೆ ಮನವಿ ಮಾಡುತ್ತೇನೆ. ಈ ಎಲ್ಲವನ್ನೂ ಮೀರಿ ನೀವುಗಳು ರಾಷ್ಟ್ರದ ಹಿತವನ್ನು ಕಾಯುತ್ತೀರಿ ಮತ್ತು ರಾಷ್ಟ್ರವನ್ನು ಕಟ್ಟುತ್ತೀರಿ ಎಂಬ ವಿಶ್ವಾಸ ನನಗಿದೆ. ಸಂಯಮ, ಸೌಹಾರ್ದತೆಗೆ ಆದ್ಯತೆ ನೀಡಿ ಮತ್ತು ಅಗ್ನಿಸ್ಪರ್ಶ, ಹಿಂಸೆಯನ್ನು ಕೈಬಿಟ್ಟು ಪರಿಹಾರ ಹುಡುಕಿ ಎಂದು ಕೋರುತ್ತೇನೆ ಎಂದು ಮೋದಿ ಮನವಿ ಮಾಡಿಕೊಂಡಿದ್ದಾರೆ.







