ಈ ಮಾಜಿ ಐಐಟಿ ಪ್ರಾಧ್ಯಾಪಕ ಈಗೇನು ಮಾಡುತ್ತಿದ್ದಾರೆ ಗೊತ್ತೇ?

ದಿಲ್ಲಿ ಐಐಟಿ ಇಂಜಿನಿಯರಿಂಗ್ ಪದವೀಧರ, ಹೌಸ್ಟನ್ ವಿವಿಯ ಪಿಎಚ್‌ಡಿ ಪದವೀಧರ, ಐಐಟಿಯ ಮಾಜಿ ಪ್ರಾಧ್ಯಾಪಕ ಅಲೋಕ್ ಸಾಗರ್ ಈಗೇನು ಮಾಡುತ್ತಿದ್ದಾರೆ ಗೊತ್ತೇ? ಕಳೆದ 32 ವರ್ಷಗಳಿಂದ ಮಧ್ಯಪ್ರದೇಶದ ಬುಡಕಟ್ಟು ಜನಾಂಗದ ಗ್ರಾಮದಲ್ಲಿ ವಾಸ. ಅಲ್ಲಿನ ನಿವಾಸಿಗಳ ಸೇವೆ ಮಾಡುವುದು ಅವರ ಕಾಯಕ!
ಐಐಟಿಯಲ್ಲಿ ಪ್ರಾಧ್ಯಾಪಕರಾಗಿದ್ದಾಗ ಆರ್‌ಬಿಐ ಮಾಜಿ ಗವರ್ನರ್ ರಘುರಾಮ ರಾಜನ್ ಸೇರಿದಂತೆ ಹಲವು ಮಂದಿ ವಿದ್ಯಾರ್ಥಿಗಳ ಬಾಳು ಬೆಳಗಿಸಿದ್ದಾರೆ. ಅಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿದ ಬಳಿಕ ಅಲೋಕ್ ಮಧ್ಯಪ್ರದೇಶದ ಹೊಶಂಗಾಬಾದ್ ಹಾಗೂ ಬೆತುಲ್ ಜಿಲ್ಲೆಯ ಬುಡಕಟ್ಟು ಜನಾಂಗದವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ 26 ವರ್ಷಗಳಿಂದ 750 ಮಂದಿ ಬುಡಕಟ್ಟು ಜನಾಂಗದವರ ಜತೆ ಕೊಚಮು ಎಂಬ ಗುಡ್ಡಗಾಡು ಗ್ರಾಮದಲ್ಲಿ ಇವರು ವಾಸ ಮಾಡುತ್ತಿದ್ದಾರೆ. ರಸ್ತೆ ಹಾಗೂ ವಿದ್ಯುತ್ ಸಂಪರ್ಕವೂ ಇಲ್ಲದ ಈ ಗ್ರಾಮದಲ್ಲಿ ಇರುವುದು ಒಂದು ಪ್ರಾಥಮಿಕ ಶಾಲೆ ಮಾತ್ರ.
ಅಲೋಕ್ ಈ ಭಾಗದಲ್ಲಿ 50 ಸಾವಿರಕ್ಕೂ ಹೆಚ್ಚು ಗಿಡಮರಗಳನ್ನು ಬೆಳೆಸಿದ್ದಾರೆ. ಜನ ತಳಹಂತದಲ್ಲಿ ಕೆಲಸ ಮಾಡುವ ಮೂಲಕ ರಾಷ್ಟ್ರಕ್ಕೆ ಕೊಡುಗೆ ಸಲ್ಲಿಸಬಹುದು ಎನ್ನುವುದು ಅವರ ಬಲವಾದ ನಂಬಿಕೆ. ಜನರಿಗೆ ತಮ್ಮ ಬುದ್ಧಿಮತ್ತೆಯನ್ನು ಕುರುಹಾಗಿ ಡಿಗ್ರಿಗಳನ್ನು ಪ್ರದರ್ಶಿಸಲು ಆಸಕ್ತಿಯೇ ವಿನಃ ಜನಸೇವೆಯಲ್ಲಿ ಅಲ್ಲ ಎನ್ನುವುದು ಅವರ ಆಕ್ಷೇಪ.
ಇತ್ತೀಚೆಗೆ ಬೆತುಲ್ ಜಿಲ್ಲೆಯಲ್ಲಿ ನಡೆದ ಚುನಾವಣೆ ವೇಳೆ ಸ್ಥಳೀಯ ಅಧಿಕಾರಿಗಳು ಸಂಶಯದ ಮೇರೆಗೆ ಇವರನ್ನು ಜಾಗ ಖಾಲಿ ಮಾಡಲು ಸೂಚಿಸಿದರು. ಆಗ ತಮ್ಮ ವಿದ್ಯಾರ್ಹತೆಯ ದೊಡ್ಡ ಪಟ್ಟಿಯನ್ನು ಪ್ರದರ್ಶಿಸಿದಾಗ ಅಧಿಕಾರಿಗಳು ದಂಗು.







