ಮಾನಸಿಕ ಅಸ್ವಸ್ಥ ರೋಗಿಗಳಿಗೆ ಸಿಗದ ಸಹಾಯಹಸ್ತ

ಮಾನಸಿಕ ಆರೋಗ್ಯದ ಶ್ರೇಷ್ಠತಾ ಕೇಂದ್ರಗಳಿಗೆ ನೀಡುತ್ತಿದ್ದ 30 ಕೋಟಿ ರೂಪಾಯಿ ಅನುದಾನವನ್ನು 33.70 ಕೋಟಿಗೆ ಹೆಚ್ಚಿಸಿದೆ. ದೇಶದಲ್ಲಿ ಇಂಥ 15 ಶ್ರೇಷ್ಠತಾ ಮಾನಸಿಕ ಆರೋಗ್ಯ ಕೇಂದ್ರಗಳು ಹಾಗೂ 35 ಮಾನಸಿಕ ಆರೋಗ್ಯದ ಸ್ನಾತಕೋತ್ತರ ತರಬೇತಿ ವಿಭಾಗಗಳಿಗೆ ನೆರವು ನೀಡಲಾಗುತ್ತಿದೆ. ಇದರಿಂದಾಗಿ ರಾಷ್ಟ್ರಾದ್ಯಂತ ಮಾನಸಿಕ ಆರೋಗ್ಯ ವೃತ್ತಿಪರರ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುವ ಸಾಧ್ಯತೆ ಇದೆ.
ಇಡೀ ದಕ್ಷಿಣ ಆಫ್ರಿಕಾದ ಜನಸಂಖ್ಯೆಯಷ್ಟು ಮಂದಿ ಅಂದರೆ ಆರು ಕೋಟಿ ಭಾರತೀಯರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಇಷ್ಟಾಗಿಯೂ ಭಾರತ ಮಾನಸಿಕ ವೈದ್ಯಕೀಯ ವೃತ್ತಿಪರರ ಕೊರತೆ ಎದುರಿಸುತ್ತಿದೆ ಹಾಗೂ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಹಣ ವಿನಿಯೋಗಿಸುವ ವಿಚಾರದಲ್ಲೂ ಭಾರತ ಹಿಂದಿದೆ.
ದೇಶದಲ್ಲಿ ಸುಮಾರು ಎರಡು ಕೋಟಿ ಮಂದಿ ಅಂದರೆ ದೇಶದ ಜನಸಂಖ್ಯೆಯ ಶೇ.2ರಷ್ಟು ಮಂದಿ ತೀವ್ರ ಮಾನಸಿಕ ಕಾಯಿಲೆಯಾದ ಛಿದ್ರ ಮನಸ್ಕತೆ ಹಾಗೂ ಎರಡು ಧ್ರುವಗಳ ಅಸ್ವಸ್ಥತೆ (ಬೈಪೋಲಾರ್ ಡಿಸ್ ಆರ್ಡರ್)ಯಿಂದ ಬಳಲುತ್ತಿದ್ದಾರೆ. 2005ರ ಅಂತ್ಯದ ವೇಳೆಗೆ ಸುಮಾರು 5 ಕೋಟಿ ಮಂದಿ ಅಂದರೆ ಒಟ್ಟು ಜನಸಂಖ್ಯೆಯ ಶೇ.5ರಷ್ಟು ಮಂದಿ ಇತರ ಬಗೆಯ ಮಾನಸಿಕ ಕಾಯಿಲೆಗಳಾದ ಖಿನ್ನತೆ, ಉದ್ವಿಗ್ನತೆಯಂಥ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಜೆ.ಪಿ. ನಡ್ಡಾ, ವಿಸ್ತೃತ ಆರ್ಥಿಕತೆ ಹಾಗೂ ಆರೋಗ್ಯ ಕ್ಷೇತ್ರದ ಕುರಿತ ರಾಷ್ಟ್ರೀಯ ಆಯೋಗದ ಅಂಕಿ ಅಂಶಗಳನ್ನು ಉಲ್ಲೇಖಿಸಿ 2016ರ ಮೇ ತಿಂಗಳಲ್ಲಿ ಲೋಕಸಭೆೆಗೆ ತಿಳಿಸಿದ್ದರು.
ಭಾರತ ಮಾನಸಿಕ ಆರೋಗ್ಯ ಕ್ಷೇತ್ರದ ಮೇಲೆ ಒಟ್ಟು ಬಜೆಟ್‌ನ ಶೇ.0.06ನ್ನು ಮಾತ್ರ ವೆಚ್ಚ ಮಾಡುತ್ತದೆ. ಇದು ಬಾಂಗ್ಲಾದೇಶಕ್ಕಿಂತಲೂ (0.44) ಕಡಿಮೆ. ವಿಶ್ವದ ಶ್ರೀಮಂತ ದೇಶಗಳು ತಮ್ಮ ಒಟ್ಟು ಬಜೆಟ್‌ನ ಶೇ.4ರಷ್ಟನ್ನು ಮಾನಸಿಕ ಆರೋಗ್ಯ ಸಂಶೋಧನೆಗೆ, ಮೂಲಸೌಕರ್ಯ, ಚೌಕಟ್ಟು ಹಾಗೂ ಪ್ರತಿಭೆೆ ಕ್ರೋಡೀಕರಣಕ್ಕೆ ಬಳಸುತ್ತವೆ ಎಂದು 2011ರ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳುತ್ತದೆ.
ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಆರೋಗ್ಯ ಕ್ಷೇತ್ರ ರಾಜ್ಯ ವಿಷಯವಾಗಿರುವುದರಿಂದ ಕೇಂದ್ರ ಸರಕಾರ ಮಾನಸಿಕ ರೋಗಿಗಳಿಗೆ ಸಂಬಂಧಿಸಿದ ಯಾವುದೇ ಅಧಿಕೃತ ಅಂಕಿ ಅಂಶಗಳನ್ನು ನಿರ್ವಹಿಸುವುದಿಲ್ಲ. ಆದರೆ ಮೂರು ಸಂಸ್ಥೆಗಳಲ್ಲಿ ಈ ಬಗೆಗಿನ ಅಂಕಿ ಅಂಶಗಳು ಸಿಗುತ್ತವೆ. ಇನ್ನೊಂದು ಲಭ್ಯವಿರುವ ಅಂಕಿ ಅಂಶವೆಂದರೆ ಮಾನಸಿಕ ಕಾಯಿಲೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಕುರಿತ ಅಂಕಿ ಅಂಶಗಳು.
ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗುವವರ ಪ್ರಮಾಣ 2010ರಲ್ಲಿ ಶೇ.7ರಷ್ಟಿರುವುದು 2014ರಲ್ಲಿ ಶೇ.5.4ಕ್ಕೆ ಇಳಿದಿದ್ದರೂ, ಮಾನಸಿಕ ಅಸ್ವಸ್ಥತೆ ಕಾರಣದಿಂದಾಗಿ ಪ್ರತಿ ವರ್ಷ ಏಳು ಸಾವಿರ ಮಂದಿ ಆತ್ಮಹತ್ಯೆಗೆ ಶರಣಾಗುತ್ತಾರೆ.
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ ಮೂಲಕ ಸರಕಾರ ರಾಷ್ಟ್ರಮಟ್ಟದ ಮಾನಸಿಕ ಆರೋಗ್ಯ ಸಮೀಕ್ಷೆಯನ್ನು ಆರಂಭಿಸಿದೆ. ಮಾನಸಿಕ ರೋಗಿಗಳ ಸಂಖ್ಯೆಯನ್ನು ಅಂದಾಜು ಮಾಡುವುದು ಹಾಗೂ ಮಾನಸಿಕ ಆರೋಗ್ಯ ಸೇವೆಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಅಧ್ಯಯನ ನಡೆಸುವುದು ಇದರ ಉದ್ದೇಶ.
ಈ ಅಧ್ಯಯನ 2015ರ ಜೂನ್ 1ರಂದು ಆರಂಭವಾಗಿದ್ದು, 2016ರ ಎಪ್ರಿಲ್ 5ರ ವೇಳೆಗೆ 27 ಸಾವಿರ ಮಂದಿಯನ್ನು ಸಂದರ್ಶಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಲೋಕಸಭೆಗೆ ನೀಡಿದ ಉತ್ತರದಲ್ಲಿ ಬಹಿರಂಗಪಡಿಸಿದೆ.
ಭಾರತದಲ್ಲಿ ಇಂಥ ಮಾನಸಿಕ ಸಮಸ್ಯೆಯನ್ನು ನಿಭಾಯಿಸಲು ಅಗತ್ಯವಾದ ಮಾನಸಿಕ ಆರೋಗ್ಯ ವೃತ್ತಿಪರರ ಕೊರತೆ ವ್ಯಾಪಕವಾಗಿದೆ. ಅದರಲ್ಲೂ ಮುಖ್ಯವಾಗಿ ಜಿಲ್ಲಾ ಕೇಂದ್ರ ಹಾಗೂ ಉಪ ಜಿಲ್ಲಾ ಕೇಂದ್ರಗಳಲ್ಲಿ ಈ ಸಮಸ್ಯೆ ಇದೆ.
ದೇಶದಲ್ಲಿ ಒಟ್ಟು 3,800 ಮಂದಿ ಮಾನಸಿಕ ತಜ್ಞರು, 898 ಮಂದಿ ಕ್ಲಿನಿಕಲ್ ಮಾನಸಿಕ ತಜ್ಞರು, 850 ಮಂದಿ ಮಾನಸಿಕ ರೋಗ ಸಂಬಂಧಿ ಸಾಮಾಜಿಕ ಕಾರ್ಯಕರ್ತರು ಹಾಗೂ 1,500 ಮಂದಿ ಮಾನಸಿಕ ರೋಗಿಗಳ ಆರೈಕೆ ಮಾಡುವ ಶುಶ್ರೂಷಕಿಯರಿದ್ದಾರೆ ಎಂದು 2015ರ ಡಿಸೆಂಬರ್‌ನಲ್ಲಿ ಲೋಕಸಭೆಗೆ ನೀಡಿದ ಉತ್ತರದಲ್ಲಿ ವಿವರಿಸಲಾಗಿದೆ.
ಅಂದರೆ ಪ್ರತಿ ಹತ್ತು ಲಕ್ಷ ಮಂದಿ ಜನಸಂಖ್ಯೆಗೆ ಮೂವರು ಮಾತ್ರ ಮಾನಸಿಕ ತಜ್ಞರು ಇದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇದು ಕಾಮನ್ವೆಲ್ತ್ ದೇಶಗಳ ಸರಾಸರಿ ಪ್ರಮಾಣಕ್ಕಿಂತ 18 ಪಟ್ಟು ಕಡಿಮೆ. ಕಾಮನ್ವೆಲ್ತ್ ದೇಶಗಳಲ್ಲಿ ನಿಗದಿಪಡಿಸಲಾಗಿ ರುವ ಪ್ರಮಾಣ ಪ್ರತಿ ಲಕ್ಷ ಮಂದಿಗೆ 5.6 ಮಂದಿ ಮಾನಸಿಕ ತಜ್ಞರು ಇರಬೇಕು ಎನ್ನುವುದು..
ಇದರ ಜತೆಗೆ ಭಾರತದಲ್ಲಿ 66,200 ಮಾನಸಿಕ ತಜ್ಞರ ಕೊರತೆ ಇದೆ ಎಂದು ಅಂದಾಜು ಮಾಡಲಾಗಿದೆ.
ಅಂತೆಯೇ ಜಾಗತಿಕ ಸರಾಸರಿಗೆ ಹೋಲಿಸಿದರೆ, ಜಾಗತಿಕ ಮಟ್ಟದಲ್ಲಿ ಪ್ರತಿ ಲಕ್ಷ ಮಂದಿಗೆ 21.6ರಷ್ಟು ಮಾನಸಿಕ ಚಿಕಿತ್ಸಾ ದಾದಿಯರು ಇರಬೇಕು. ಅಂದರೆ ಭಾರತಕ್ಕೆ 2.70 ಲಕ್ಷ ನರ್ಸ್ ಗಳ ಕೊರತೆ ಇದೆ.
ಮಾನಸಿಕ ಆರೋಗ್ಯ ಆರೈಕೆ ಮಸೂದೆ-2013, ಮಾನಸಿಕ ಅಸ್ವಸ್ಥರ ಹಕ್ಕುಗಳ ರಕ್ಷಣೆ ಮತ್ತು ಪ್ರಚಾರಕ್ಕೆ ಉತ್ತೇಜನ ನೀಡುತ್ತದೆ. ಸಮುದಾಯದಲ್ಲಿ ಹಾಗೂ ಸಂಸ್ಥೆಗಳಲ್ಲಿ ಇದಕ್ಕೆ ಉತ್ತಮ ಆರೋಗ್ಯ ಸೇವೆ ಪಡೆಯಲು ಈ ಮಸೂದೆಯಲ್ಲಿ ಅವಕಾಶವಿದೆ. ಈ ಮಸೂದೆಯನ್ನು ರಾಜ್ಯಸಭೆೆ 2016ರ ಆಗಸ್ಟ್ 8ರಂದು ಧ್ವನಿಮತದಿಂದ ಆಂಗೀಕರಿಸಿದೆ.
ಈ ಮಸೂದೆಯ ಅನ್ವಯ, ಮಾನಸಿಕ ಆರೋಗ್ಯದ ಶ್ರೇಷ್ಠತಾ ಕೇಂದ್ರಗಳಿಗೆ ನೀಡುತ್ತಿದ್ದ 30 ಕೋಟಿ ರೂಪಾಯಿ ಅನುದಾನವನ್ನು 33.70 ಕೋಟಿಗೆ ಹೆಚ್ಚಿಸಿದೆ. ದೇಶದಲ್ಲಿ ಇಂಥ 15 ಶ್ರೇಷ್ಠತಾ ಮಾನಸಿಕ ಆರೋಗ್ಯ ಕೇಂದ್ರಗಳು ಹಾಗೂ 35 ಮಾನಸಿಕ ಆರೋಗ್ಯದ ಸ್ನಾತಕೋತ್ತರ ತರಬೇತಿ ವಿಭಾಗಗಳಿಗೆ ನೆರವು ನೀಡಲಾಗುತ್ತಿದೆ. ಇದರಿಂದಾಗಿ ರಾಷ್ಟ್ರಾದ್ಯಂತ ಮಾನಸಿಕ ಆರೋಗ್ಯ ವೃತ್ತಿಪರರ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುವ ಸಾಧ್ಯತೆ ಇದೆ.
ಕೃಪೆ: scroll.in








