ಬಂಟ್ವಾಳ: ಸಂತ್ರಸ್ತ ರೈತರಿಂದ 'ಕೃಷಿಕ್ರಾಂತಿ'

ಬಂಟ್ವಾಳ, ಸೆ.13: ಸಜೀಪಮುನ್ನೂರು ಗ್ರಾಮದ ಕೊಪ್ಪಳ ಎಂಬಲ್ಲಿ ಮುಳುಗಡೆಯಾಗುವ ಜಮೀನಿನಲ್ಲಿ ತುಂಬೆ ನೂತನ ವೆಂಟೆಡ್ ಡ್ಯಾಂನ ಸಂತ್ರಸ್ತ ರೈತರು ತುಳುನಾಡ ಕೃಷಿ ಕ್ರಾಂತಿ ಮಾಡಿದರು. ಮಾಜಿ ಶಾಸಕ ಎನ್.ಶಿವರಾಯರ ಪಾಳು ಬಿದ್ದ ಜಮೀನಿನಲ್ಲಿ ಭತ್ತದ ಬೆಳೆ ಮಾಡುವ ಮೂಲಕ ಸಂತ್ರಸ್ತ ರೈತರು ಮಂಗಳವಾರ ಬೇಸಾಯಕ್ಕೆ ಚಾಲನೆ ನೀಡಿದರು.
ಕಳೆದ 12 ವರ್ಷಗಳಿಂದ ತುಂಬೆ ನೂತನ ವೆಂಟೆಡ್ ಡ್ಯಾಂ ನಿರ್ಮಾಣ ಕಾಮಗಾರಿಯಿಂದಾಗಿ ಸ್ಥಳೀಯ ಜನರು ಜಮೀನು ಮುಳುಗಡೆಯಾಗುವ ಭೀತಿಯಿಂದ ಕೃಷಿ ಮಾಡಲಾಗದೆ ಜಮೀನನ್ನು ಹಡೀಲು ಬಿಟ್ಟಿದ್ದರು. ಒಂದೆಡೆ ಮುಳುಗಡೆಯಾಗುವ ಜಮೀನಿಗೆ ನಷ್ಟ ಪರಿಹಾರ ಸಿಗದೆ ಕಂಗಾಲಾಗಿದ್ದರೆ ಇನ್ನೊಂದೆಡೆ ಬೆಳೆ ಮಾಡಲಾಗದೆ ತೊಂದರೆ ಅನುಭವಿಸಿದ್ದರು.
ಅನೇಕ ವರ್ಷಗಳಿಂದ ಮುಳುಗಡೆಯಾಗುವ ಜಮೀನಿನ ಬಗ್ಗೆ ಮನಪಾ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡದೆ, ಸತಾಯಿಸಿಕೊಂಡು ಬರುತ್ತಿದ್ದಾರೆ, ಮುಳುಗಡೆಯಾಗುವ ಜಮೀನಿನ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ, ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾನವಾಗಿರಲಿಲ್ಲ. ಈ ನಡುವೆ ರೈತರಿಗೆ ಪರಿಹಾರ ನೀಡದೆ 5 ಮೀಟರ್‌ಗಿಂತ ಹೆಚ್ಚು ನೀರು ಸಂಗ್ರಹಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಜನಪ್ರತಿನಿಧಿಗಳು ನೀಡಿದ ಭರವಸೆಯಂತೆ 5 ಮೀಟರ್‌ಗಿಂತ ಮೇಲಿನ ಜಮೀನಿನಲ್ಲಿ ರೈತರು ಕೃಷಿ ಆರಂಭಿಸಿದ್ದಾರೆ.
ಇಷ್ಟು ವರ್ಷಗಳ ಕಾಲ ಹಡೀಲು ಬಿದ್ದಿದ್ದ ಗದ್ದೆಯಲ್ಲಿ ಮತ್ತೆ ಭತ್ತ ಬೆಳೆಯಲು ಮುಂದಾಗಿದ್ದಾರೆ. 5 ಮೀಟರ್‌ಗಿಂತ ಹೆಚ್ಚು ನೀರು ಸಂಗ್ರಹಿಸುವುದಿಲ್ಲ ಎನ್ನುವ ಮನಪಾದ ಭರವಸೆಯಂತೆ ರೈತರು ನದಿ ತೀರದ ಗದ್ದೆಗಳಲ್ಲಿ ಕೃಷಿ ಆರಂಭಿಸಿದ್ದಾರೆ. ಒಂದು ವೇಳೆ ಇದನ್ನು ಮೀರಿ ನೀರು ಸಂಗ್ರಹಿಸಿ ಬೆಳೆ ಮುಳುಗಡೆಯಾದರೆ ಅದಕ್ಕೆ ಸರಕಾರವೇ ನೇರ ಹೊಣೆ, ಈ ಕಷ್ಟ-ನಷ್ಟವನ್ನು ಸರಕಾರವೇ ಭರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಈ ಸಂದರ್ಭ ರೈತಸಂಘ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ, ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಕಾರ್ಯದರ್ಶಿ ಮನೋಹರ ಶೆಟ್ಟಿ ಎನ್., ಉಪಾಧ್ಯಕ್ಷ ಎನ್.ಕೆ.ಇದ್ದಿನಬ್ಬ, ಕೋಶಾಧಿಕಾರಿ ಸುಧೀಶ ಮಯ್ಯ, ಸಂಚಾಲಕ ಶೇಕ್ ಅಬ್ದುಲ್ಲಾ, ಸತೀಶ್ ಗೌಡ, ಜಮೀನಿನ ಮಾಲಕಿ ಮಹಾಲಕ್ಷ್ಮೀ ಹಾಜರಿದ್ದರು.







