ಪಡುಮಲೆ: ದೇಯಿ ಬೈದತಿ ಔಷಧವನ ಉದ್ಘಾಟನೆ

ಪುತ್ತೂರು, ಸೆ.13: ತುಳು ನಾಡಿನ ವೀರ ಪುರುಷರಾದ ಕೋಟಿಚೆನ್ನಯರ ತಾಯಿ ದೇಯಿ ಬೈದತಿ ಹೆಸರಿನಲ್ಲಿ ಅವರ ಜನ್ಮ ಸ್ಥಳವಾದ ಪಡುಮಲೆಯಲ್ಲಿ ‘ದೇಯಿ ಬೈದತಿ ಔಷಧವನ’ ನಿರ್ಮಿಸುವ ಮೂಲಕ ಇತಿಹಾಸ ನೆನಪಿಸುವ ಮಹಿಳೆಯ ಹೆಸರನ್ನು ಉಳಿಸಿಕೊಳ್ಳುವುದರೊಂದಿಗೆ ಪರಂಪರಾಗತ ಗ್ರಾಮೀಣ ಔಷಧಿ ಗಿಡಗಳ ಮಾಹಿತಿಯನ್ನು ನೀಡುವುದು ಹಾಗೂ ವಿನಾಶದ ಅಂಚಿನಲ್ಲಿರುವ ಔಷಧಿ ಗಿಡಗಳನ್ನು ರಕ್ಷಿಸುವುದು ಇಲಾಖೆಯ ಮುಖ್ಯ ಗುರಿಯಾಗಿದೆ ಎಂದು ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಮಂಗಳವಾರ ಪುತ್ತೂರಿನ ಪಡುಮಲೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ ಪುತ್ತೂರು ವಲಯದ ವತಿಯಿಂದ ನಿರ್ಮಿಸಲಾದ ‘ಪಡುಮಲೆ ದೇಯಿ ಬೈದಿತಿ ಔಷಧಿವನ‘ ವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕೋಟಿ - ಚೆನ್ನಯರ ತಾಯಿ ದೇಯಿ ಬೈದಿತಿ ಆ ಕಾಲದಲ್ಲಿ ಔಷದಿಗಳನ್ನು ನೀಡುತ್ತಾ ಗುಣಪಡಿಸಲಾಗದ ರೋಗಗಳನ್ನು ಶಮನ ಮಾಡಿದ್ದಾರೆಂಬ ಪ್ರತೀತಿ ಇದೆ. ಆ ಕಾಲದಲ್ಲಿ ಕಾಡಿನಿಂದ ಸಸ್ಯಗಳನ್ನು ತಂದು ಔಷಧ ನೀಡುತ್ತಿದ್ದರಾದರೂ, ಇಂದು ಔಷಧೀಯಸಸ್ಯಗಳನ್ನು ಜನರಿಗೆ ಪರಿಚಯಿಸುವ ಅಗತ್ಯವಿದೆ ಎಂಬ ನಿಟ್ಟಿನಲ್ಲಿ 6 ಎಕ್ರೆಯಲ್ಲಿ ಈ ಔಷಧೀಯ ವನವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಪಶ್ಚಿಮಘಟ್ಟದಲ್ಲಿನ ಜೀವವೈವಿಧ್ಯವನ್ನು ಪೋಷಣೆ ಮಾಡಲು ಹಾಗೂ ಅಪರೂಪದ ಔಷಧೀಯ ಸಸ್ಯಗಳನ್ನು ನೆಡುವ ಕಾರ್ಯ ಇಲ್ಲಿ ಮಾಡಲಾಗಿದೆ. ಸಸ್ಯಗಳನ್ನು ಸಲಹಿ ಪೋಷಣೆ ಮಾಡಲು ಧಾರ್ಮಿಕ ಚೌಕಟ್ಟಿನಡಿಯಲ್ಲಿ ರಾಶಿವನ, ನಕ್ಷತ್ರವನವನ್ನು ಸೇರಿಸಿಕೊಳ್ಳಲಾಗಿದೆ. ಕೋಟಿ ಚೆನ್ನಯರ ನೆನಪಿನ ಜತೆಗೆ ದೇಯಿ ಬೈದಿತಿ ಇತಿಹಾಸ ಉಳಿಸುವ ನಿಟ್ಟಿನಲ್ಲಿ ಈ ಔಷಧೀವನವನ್ನು ಸ್ಥಾಪಿಸಲಾಗಿದೆ ಎಂದರು.
ನಮ್ಮ ಹಿರಿಯರು ಪರಂಪರಾಗತವಾಗಿ ಔಷಧಿಗಳನ್ನು ನಿರ್ಮಿಸಿ ದೊಡ್ಡದೊಡ್ಡ ರೋಗಗಳನ್ನು ನಿವಾರಣೆ ಮಾಡಿದ್ದಾರೆ. ಅಂತಹ ಔಷಧಿಗಳ ಮಾಹಿತಿಯನ್ನು ಸಂಗ್ರಹಿಸಿ ಇಡುವ ಕಾರ್ಯದ ಇಲ್ಲಿ ಮಾಡಲಾಗುತ್ತದೆ. ನಶಿಸಿಹೋಗುವ ಸಸ್ಯ ಪ್ರಬೇದಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಇಲಾಖೆಯಿಂದ ಹಾಕಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಜನರ ಆಕರ್ಷಣೆ ಗಳಿಸುವ ಕೇಂದ್ರವಾಗಿ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಅರಣ್ಯ ರಕ್ಷಣೆಯಲ್ಲಿ ವೌಲ್ಯಯುತ ಗಿಡಗಳ ರಕ್ಷಣೆಯೂ ಮುಖ್ಯವಾಗಿದ್ದು, ವಿನಾಶದ ಅಂಚಿನಲ್ಲಿರುವ ಗಿಡಗಳ ರಕ್ಷಣೆಗಾಗಿ ಇಲಾಖೆಯಲ್ಲಿ ಔಷಧಿ ಪ್ರಾಧಿಕಾರವನ್ನು ರಚಿಸಲಾಗಿದ್ದು ಈ ಪ್ರಾಧಿಕಾರವು ವಿನಾಶದಂಚಿನಲ್ಲಿರುವ ಗಿಡಗಳನ್ನು ಪತ್ತೆ ಹಚ್ಚಿ ಅವುಗಳ ರಕ್ಷಣೆಯ ಕೆಲಸ ಮಾಡುತ್ತಿದೆ. ಬಂಟ್ವಾಳದ ಕಾರಿಂಜ ದೇವಳದ ಬಳಿಯಲ್ಲಿ ಈಗಾಗಲೇ ದೈವೀ ವನ ನಿರ್ಮಿಸಲಾಗಿದೆ. ಶ್ರೀಗಂಧದ ಗಿಡಗಳನ್ನು ನೈಸರ್ಗಿಕವಾಗಿ ರಕ್ಷಿಸಲು ಬಂಟ್ವಾಳದ ವೀರಕಂಭ ಮತ್ತು ಉಡುಪಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಆಯ್ದ ಗ್ರಾಮ ಪಂಚಾಯತ್ ಮತ್ತು ಶಾಲೆಗಳಲ್ಲಿ ಹಸಿರು ಗ್ರಾಮ ಮತ್ತು ಹಸಿರು ಶಾಲೆ ಯೋಜನೆಯನ್ನು ರೂಪಿಸಲಾಗುವುದು ಎಂದರು.
ದೇಯಿ ಬೈದತಿ ಔಷಧಿ ತಯಾರಿಸುತ್ತಿದ್ದ ನೆನಪಿನಲ್ಲಿ ನಿರ್ಮಿಸಲಾದ ಕುಟೀರವನ್ನು ಉದ್ಘಾಟಿಸಿದ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ ಅರಣ್ಯ ಇಲಾಖೆಯಿಂದ ಸಮಾಜ ಮುಖಿ ಕಾರ್ಯಕ್ರಮಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಮಗುವಿನ ಹೆಸರಿನಲ್ಲಿ ಮರಗಳನ್ನು ಬೆಳೆಯುವ ಕಾರ್ಯವಾದಾಗ ಮಕ್ಕಳಿಗೂ ಪರಿಸರ ರಕ್ಷಣೆಯ ಅರಿವು ಮೂಡಲು ಸಾಧ್ಯವಿದೆ. ಈ ವನದಲ್ಲಿ ವೃಕ್ಷ ಸಂಕುಲವನ್ನು ಉಳಿಸುವ ಜತೆಗೆ ಜನರಿಗೆ ವಾಯು ವಿಹಾರ ಕೇಂದ್ರವಾಗಿ ಪ್ರವಾಸೋಧ್ಯಮ ಕೇಂದ್ರವಾಗಿ ಹೊರಹೊಮ್ಮಲಿ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ, ಸದಸ್ಯರಾದ ರಾಧಾಕೃಷ್ಣ ಬೋರ್ಕರ್, ಉಷಾ ಅಂಚನ್, ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಗೌಡ ಕನ್ನಾಯ, ಪುತ್ತೂರು ನಗರ ಸಬಾ ಅಧ್ಯಕ್ಷೆ ಜಯಂತಿ ಬಲ್ನಾಡು, ಮೆಸ್ಕಾಂ ನಿರ್ದೇಶಕಿ ಮಲ್ಲಿಕಾ ಪಕಳ, ಪುತ್ತೂರು ತಹಶೀಲ್ದಾರ್ ಪುಟ್ಟ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ.ಹನುಮಂತಪ್ಪ ಸ್ವಾಗತಿಸಿದರು. ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ ಎಸ್. ಬಿಜೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂತೋಷ್ ಕೆ. ಕಾರ್ಯಕ್ರಮ ನಿರೂಪಿಸಿದರು.
ನೇತ್ರಾವತಿ ಹಿಂದೆ ಪ್ರಶ್ನಿಸಬೇಕಿತ್ತು
ಕಾವೇರಿ ವಿಚಾರದಲ್ಲಿ ಜನರ ಬಾವನಾತ್ಮಕ ವಿಚಾರವಾದರೂ ಉದ್ರೇಕಗೊಳ್ಳುವುದು ಸರಿಯಲ್ಲ. ನ್ಯಾಯಾಲಯದ ವಿಚಾರದಲ್ಲಿ ಮುಂದಿನ ನಿರ್ಧಾರವನ್ನು ಕೂನೂನಿನಲ್ಲಿ ಮನ್ನಡೆಯಬೇಕಾಗಿದ್ದು, ಇದಕ್ಕೆ ಬೇಕಾದ ವ್ಯವಸ್ಥೆನ್ನು ಮಾಡಲಾಗುವುದು. ಜನತೆ ಯಾವುದೇ ಅಶಾಂತಿಗೆ ಅವಕಾಶ ನೀಡದೆ ಶಾಂತಿಯನ್ನು ಕಾಪಾಡಿಕೊಳ್ಳಬೇಕು. ನೇತ್ರಾವತಿ ವಿಚಾರ 8 ವರ್ಷದ ಹಿಂದೆ ಆರಂಭವಾಗಿದ್ದು, ಆಗಲೇ ಪ್ರಶ್ನಿಸಿ ತಡೆಯುತ್ತಿದ್ದರೆ ಸುಲಭದಲ್ಲಿ ಆಗುತ್ತಿದ್ದು, ಆಗ ಇದರ ಬಗ್ಗೆ ಮಾತನಾಡದವರು ಈಗ ಮಾತನಾಡುತ್ತಿರುವುದೇಕೆ ಎಂದು ಪ್ರಶ್ನಿಸಿದ ರಮಾನಾಥ ರೈ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ. ಆ ಭಾಗದ ಶಾಸಕರಿಗೆ ಮನವರಿಕೆ ಮಾಡದೆ ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಿಲ್ಲ ಎಂದು ಸಚಿವ ರಮಾನಾಥ ರೈ ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.
ಔಷಧಿ ವನದಲ್ಲಿನ ವಿಶೇಷತೆಗಳು
ಸುಮಾರು 6 ಎಕ್ರೆ ವ್ಯಾಪ್ತಿಯಲ್ಲಿರುವ ಔಷಧಿ ವನವನ್ನು ಒಟ್ಟು 9 ಬಾಗವಾಗಿ ವಿಂಗಡಿಸಿದ್ದು, 1.ರಾಶಿ ನಕ್ಷತ್ರ ವನ, 2. ನವಗ್ರಹ ವನ, 3. ಅಷ್ಟ ದಿಕ್ಪಾಲಕ ವನ, 4. ಶಿವ ಪಂಚಾಯತ ವನ, 5. ಪ್ರಾಥಮಿಕ ಆರೋಗ್ಯ ಚಿಕಿತ್ಸಾ ವನ, 6. ಪಶ್ಚಿಮ ಘಟ್ಟ ಪ್ರಭೇದ ವನ, 7. ಮಲ್ಲಿಗೆ ವನ, 8. ಬಿದಿರು ವನ, 9. ಮಾನವ ಅಂಗಾಂಗ ಔಷಧ ವನ ಎಂದು ವಿಂಗಡಿಸಲಾಗಿದೆ.
ರಾಶಿ- ನಕ್ಷತ್ರವನದಲ್ಲಿ 12 ರಾಶಿಗಳಿಗೆ ಸಂಬಂಧಿಸಿದ 12 ಪ್ರಧಾನ ಗಿಡಗಳು ಮತ್ತು ಪ್ರತೀ ರಾಶಿ ಗಿಡದ ಸುತ್ತ 3 ನಕ್ಷತ್ರ ಗಿಡಗಳಿವೆ. ಶಿವ ಪಂಚಾಯತ ವನದಲ್ಲಿ 10 ಬಗೆ, ನವಗ್ರಹ ವನದಲ್ಲಿ 9, ಅಷ್ಟ ದಿಕ್ಪಾಲಕ ವನದಲ್ಲಿ 8 ಮತ್ತು ಮಲ್ಲಿಗೆ ವನದಲ್ಲಿ 4 ಬಗೆಯ ಗಿಡಗಳಿವೆ. ಗಿಡಮೂಲಿಕೆ ಮಹತ್ವ, ಧಾರ್ಮಿಕ ಮಹತ್ವ, ಜಾನಪದ ಮಹತ್ವ ಮತ್ತು ವೈಜ್ಞಾನಿಕ ಮಹತ್ವಗಳನ್ನು ಇಲ್ಲಿ ಅನುಸರಿಸಲಾಗಿದೆ.
ಔಷಧಿ ವನಕ್ಕೆ ಸುಂದರ ಪ್ರವೇಶ ದ್ವಾರ ರಚಿಸಲಾಗಿದ್ದು, ಒಳಗೆ ಬಲಬಾಗದಲ್ಲಿ ಗೋಪುರ ಆಕೃತಿಯ ಮಾಹಿತಿ ಕೇಂದ್ರವಿದೆ. ಬೆಟ್ಟದ ತುತ್ತ ತುದಿಯಲ್ಲಿ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಮಧ್ಯದಲ್ಲಿ ದೇಯಿ ಬೈದೆತಿ ಕುಟೀರ ನಿರ್ಮಿಸಲಾಗಿದೆ. ಜಗುಲಿಯಲ್ಲಿ ಕುಳಿತು ದೇಯಿ ಬೈದ್ಯೆತಿ ಗಿಡ ಮೂಲಿಕೆ ಔಷಧಿ ತಯಾರಿಸುತ್ತಿರುವ ಮತ್ತು ಪಕ್ಕದಲ್ಲಿ ಅವಳಿ ಮಕ್ಕಳಾದ ಕೋಟಿ - ಚೆನ್ನಯರು ಕೈಯ್ಯಲ್ಲಿ ಔಷಧ ಸಸ್ಯ ಹಿಡಿದುಕೊಂಡು ನಿಂತಿರುವ ಪ್ರತಿಮೆಗಳಿವೆ. ಅಂಗಳದಲ್ಲಿ ಕೋಳಿಗಳು ಓಡಾಡುತ್ತಿರುವುದು, ಆಕಳು-ಕರು ಮುದ್ದಾಡುತ್ತಿರುವ ಪ್ರತಿಮೆಗಳಿವೆ.







