ದನದ ಸೆಗಣಿ ತಿನ್ನಿಸಿದರು! ಕೋವಿಯಿಂದ ಎದೆಗೆ ಹೊಡೆದರು!: ಗೋರಕ್ಷಕರಿಂದ ಹಲ್ಲೆಗೊಳಗಾದ ಯುವಕ ಹೇಳಿಕೆ
ಮಡಿಕೇರಿಯಲ್ಲಿ ಗೋ ಸಾಗಾಟ ವಾಹನದ ಮೇಲೆ ಗುಂಡಿನ ದಾಳಿ ಪ್ರಕರಣ

ಮಂಗಳೂರು, ಸೆ. 13: ''ಕೃಷಿಗಾಗಿ ದನವನ್ನು ಖರೀದಿಸಿ ಪಿಕಪ್ ವಾಹನದಲ್ಲಿ ತರುತ್ತಿದ್ದಾಗ ಮಾರ್ಗಮಧ್ಯೆ ಸುಮಾರು 20 ಮಂದಿಯ ತಂಡದಲ್ಲಿ ಓರ್ವ ತನ್ನ ಬಳಿಯಿಂದ ಕೋವಿ ತೆಗೆದು ಪಿಕಪ್‌ನತ್ತ ಎರಡು ಬಾರಿ ಗುಂಡು ಹಾರಿಸಿದ. ನಾವಿಬ್ಬರೂ ವಾಹನದಿಂದ ಹೊರಬಂದು ಓಡಿದೆವು. ಅಟ್ಟಾಡಿಸಿದ ತಂಡ ನನ್ನನ್ನು ಹಿಂಬಾಲಿಸಿ ಯದ್ವಾ ತದ್ವಾ ಹಲ್ಲೆ ನಡೆಸಿತು. ಗುಂಡು ಹೊಡೆದಾತ ತನ್ನ ಕೋವಿಯಿಂದ ನನ್ನ ಎದೆಗೆ ಹೊಡೆದ. ನಾನು ಅಂಗಾಲಾಚಿದರೂ ಬಿಡಲಿಲ್ಲ. ಇದೇ ಹೊತ್ತಿಗೆ ಗುಂಪಿನಲ್ಲಿದ್ದ ಕೆಲವು ನನ್ನನ್ನು ಬಲವಂತವಾಗಿ ಸೆಗಣಿ ತಿನ್ನಿಸಿದರು.''
ಮಡಿಕೇರಿ ತಾಲೂಕಿನ ಕಗ್ಗೋಡ್ಲು ಎಂಬಲ್ಲಿ ರವಿವಾರ ಬೆಳಗ್ಗೆ ದನ ಸಾಗಾಟದ ವಾಹನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಗಂಭೀರ ಗಾಯಗೊಂಡು ದೇರಳಕಟ್ಟೆ ಆಸ್ಪತ್ರೆಗೆ ದಾಖಲಾಗಿರುವ ವೀರಾಜಪೇಟೆ ತಾಲೂಕಿನ ಕೊಂಡಂಗೇರಿ ನಿವಾಸಿ ಪಿ.ಎ.ಬಶೀರ್ (35) ಅವರು ಅಂದಿನ ಘಟನೆಯನ್ನು 'ವಾರ್ತಾಭಾರತಿ'ಗೆ ವಿವರಿಸಿದ್ದು ಹೀಗೆ.
''ಕಗ್ಗೋಡ್ಲು ಎಂಬಲ್ಲಿ ರವಿವಾರ ಬೆಳಗ್ಗೆ ಗಣಪತಿ ಎಂಬವರಿಂದ ಕೃಷಿಗಾಗಿ ದನವನ್ನು ಖರೀದಿಸಿದ್ದೆ. ಕಗ್ಗೋಡ್ಲುಯಿಂದ ವಾಹನದಲ್ಲಿ ದನವನ್ನು ಸಾಗಾಟ ಮಾಡಿ ಕೇವಲ ಅರ್ಧ ಕಿ.ಮೀ. ಹೋಗುತ್ತಿದ್ದಂತೆ ಕೆಂಪು ಬಣ್ಣದ ಮಾರುತಿ 800 ವಾಹನವೊಂದು ಪಿಕಪ್‌ಗೆ ಅಡ್ಡವಾಗಿ ನಿಂತಿತು. ಕ್ಷಣಾರ್ಧದಲ್ಲಿ ಅಲ್ಲಿ ಓಮ್ನಿ ಮತ್ತು ಕೆಲವು ಬೈಕ್‌ಗಳಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಸೇರಿದರು. ಗುಂಪಿನಲ್ಲಿದ್ದ ಮಡಿಕೇರಿ ಬಳಿಯ ನಿವಾಸಿ ವಿಠಲ ಎಂಬಾತ ಕೋವಿಯಿಂದ ನಾವಿದ್ದ ಪಿಕಪ್ ವಾಹನದತ್ತ ಎರಡು ಬಾರಿ ಗುಂಡು ಹಾರಿಸಿದ. ಒಂದು ಗುಂಡು ಪಿಕಪ್ ವಾಹನದ ಗಾಜುಗಳನ್ನು ಪುಡಿಗೈದಿತು. ಇದರಿಂದ ನಾವಿಬ್ಬರೂ ಹೆದರಿದೆವು. ಚಾಲಕ ಅಬ್ದುಲ್ ಸಲಾಂ ಮೊದಲು ವಾಹನದಿಂದ ಇಳಿದು ಓಡ ತೊಡಗಿದ. ನಾನು ಇನ್ನೊಂದು ಕಡೆಯಿಂದ ಓಡಿದೆ. ಗುಂಪಿನಲ್ಲಿದ್ದವರು ನನ್ನನ್ನು ಹಿಂಬಾಲಿಸಿ ಹಿಡಿದು ಹೊಡೆಯಲು ಪ್ರಾರಂಭಿಸಿದರು. ಗಂಪಿನಲ್ಲಿದ್ದವರು ಕೆಲವರು ಕೈ, ಕಾಲು ಸಹಿತ ಸಿಕ್ಕಿದ ವಸ್ತುಗಳಿಂದ ಹೊಡೆದಿದ್ದಾರೆ. ವಿಠಲ ಎಂಬಾತ ಕೋವಿಯಿಂದ ನನ್ನ ಎದೆಗೆ ಬಲವಾಗಿ ಹೊಡೆದಿದ್ದಾರೆ. ಘಟನೆಯಲ್ಲಿ ಕೈ ಮೂಳೆ ಮುರಿತಕ್ಕೊಳಗಾಗಿದೆ. ತಲೆ, ಎದೆಯ ಭಾಗಗಳಿಗೆ ಗಂಭೀರ ಗಾಯಗಳಾಗಿವೆ'' ಎಂದು ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಶೀರ್ ನಡೆದ ಘಟನೆಯನ್ನು ವಿವರಿಸಿದ್ದಾರೆ.
ಅಬ್ದುಲ್ ಸಲಾಂ ಹಾಗೂ ಪಿ.ಎ. ಬಶೀರ್ ಕೃಷಿಕರಾಗಿದ್ದು, ಸಲಾಂ ತೋಟವನ್ನು ಹೊಂದಿದ್ದು, ಕಾಫಿ, ಕರಿಮೆಣಸು, ಏಲಕ್ಕಿ ಮೊದಲಾದ ಬೆಳೆಗಳನ್ನು ಬೆಳೆಸಿ ಮಾರಾಟ ಮಾಡುವವರಾಗಿದ್ದರೆ, ಬಶೀರ್ ಅವರು ತೋಟದಿಂದ ತೋಟಕ್ಕೆ ಹೋಗಿ ಬಾಳೆ ಕಾಯಿಯನ್ನು ಸಂಗ್ರಹಿಸಿ ಮಾರಾಟ ಮಾಡುವ ಕಾಯಕವನ್ನು ಹೊಂದಿದ್ದಾರೆ.
ಘಟನೆಯಲ್ಲಿ ಆರೋಪಿಗಳ ಹಲ್ಲೆಯಿಂದ ಸಲಾಂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ, ಗಂಭೀರ ಗಾಯಗೊಂಡ ಬಶೀರ್‌ನನ್ನು ಪೊಲೀಸರ ಸಹಕಾರದಿಂದ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆ ತರಲಾಗಿತ್ತು.
ಘಟನೆಗೆ ಸಂಬಂಧಿಸಿ ಒಟ್ಟು 20 ಮಂದಿಯ ವಿರುದ್ಧ ದೂರು ದಾಖಲಾಗಿದ್ದು, ಈವರೆಗೂ ಯಾರನ್ನೂ ಬಂಧಿಸಿಲ್ಲ. ತನಿಖೆ ಮುಂದುವರಿದಿದೆ ಎಂದು ಮಡಿಕೇರಿ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.







