ನಿಯಮಗಳನ್ನು ಪಾಲಿಸದ ಸಿಮ್ ಮಾರಾಟಗಾರರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಮಂಗಳೂರು, ಸೆ. 13: ಮೊಬೈಮ್ ಸಿಮ್ ಕಾರ್ಡ್‌ಗಳ ದುರುಪಯೋಗವಾಗುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಇಂದು ನಗರ ಪೊಲೀಸರು ವಿವಿಧ ಸಿಮ್ ಮಾರಾಟ ಮತ್ತು ವಿತರಕ ಅಂಗಡಿಗಳ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ಗ್ರಾಹಕರಿಗೆ ಸಿಮ್ ಕಾರ್ಡ್ ವಿತರಿಸುವಾಗ ಸರಿಯಾದ ದಾಖಲೆಗಳನ್ನು ಪಡೆದುಕೊಳ್ಳದೇ ಇರುವುದು, ಗ್ರಾಹಕರಿಂದ ಪಡೆದುಕೊಂಡ ಭಾವಚಿತ್ರ, ವಿಳಾಸ ದಾಖಲೆಗಳನ್ನು ವಿತರಿಸಿದ ಸಿಮ್ ನಂಬರ್‌ಗಳಿಗೆ ಅನುಗುಣವಾಗಿ ನಮೂದು ಮಾಡದೇ ಇರುವುದು, ಕಸ್ಟಮರ್ ಅಪ್ಲಿಕೇಷನ್ ಫಾರಂಗಳಿಗೆ ಗ್ರಾಹರ ಸಹಿ ಪಡೆಯದೇ ಇರುವುದು, ಗ್ರಾಹಕರ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ನಡೆಸದೇ ಒಂದೇ ದಾಖಲೆಗೆ ಹಲವು ಸಿಮ್ ಕಾರ್ಡ್‌ಗಳನ್ನು ವಿತರಿಸಿರುವುದು ಕಂಡು ಬಂದಿದೆ.
ಇದರಿಂದ ಗ್ರಾಹಕರು ಅನವಶ್ಯಕವಾಗಿ ತೊಂದರೆಗೊಳಗಾಗುವ, ಸಿಮ್‌ಗಳನ್ನು ಕ್ರಿಮಿನಲ್ ಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಕಂಡುಬಂದಿದ್ದು, ಈ ಬಗ್ಗೆ ಸಂಬಂಧಪಟ್ಟ ದಾಖಲೆಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈಗಾಗಲೇ ಬೇರೆಯವರ ಹೆಸರಿನ ದಾಖಲೆ ನೀಡಿ ಸಿಮ್ ಕಾರ್ಡ್ ಪಡೆದುಕೊಂಡು ದುರುಪಯೋಗಪಡಿಸಿದ, ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಆರೋಪಿಗಳಾದ ಶೈಲೇಶ್ ಶೈಲು ಮತ್ತು ಶಿವ ಪ್ರಸಾದ್ ಶಿವ ಎಂಬವರ ವಿರುದ್ಧ ಹಾಗೂ ಸಿಮ್ ಕಾರ್ಡ್ ವಿತರಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, ಸುಮಾರು 5 ತಿಂಗಳ ಹಿಂದೆ ಮಂಗಳೂರು ಉತ್ತರ ಠಾಣೆಯಲ್ಲಿಯೂ ಸಿಮ್ ಕಾರ್ಡ್ ದುರುಪಯೋಗದ ಬಗ್ಗೆ ಒಂದು ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಸಾರ್ವಜನಿಕರು ಸಿಮ್ ಕಾರ್ಡ್ ಖರೀದಿ ಮತ್ತು ಬಳಕೆಯ ಸಂದರ್ಭದಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.







