ದಿಲ್ಲಿಯಲ್ಲಿ ಚಿಕುನ್‌ಗುನ್ಯಾ ಉಲ್ಬಣ: 3 ಬಲಿ
ಸಮಸ್ಯೆಗೆ ಜಂಗ್-ಮೋದಿ ಕಾರಣ: ಕೇಜ್ರಿವಾಲ್
ಹೊಸದಿಲ್ಲಿ, ಸೆ.13: ನಗರದಲ್ಲಿ ಚಿಕುನ್‌ಗುನ್ಯಾ ಹರಡಿರುವ ಕುರಿತು ಟೀಕೆಗಳು ಹೆಚ್ಚಿರುವಂತೆಯೇ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಅಪವಾದವನ್ನು ಪ್ರಧಾನಿ ಹಾಗೂ ಲೆಫ್ಟಿನೆಂಟ್ ಗವರ್ನರ್‌ರ ತಲೆಗಳಿಗೆ ಹೊರಿಸಲು ಇಂದು ಪ್ರಯತ್ನಿಸಿದ್ದಾರೆ.
ತನ್ನ ಹಾಗೂ ತನ್ನ ಸಹೋದ್ಯೋಗಿಗಳಿಗೆ ಅಧಿಕಾರವನ್ನು ಸಂಪೂರ್ಣವಾಗಿ ಕಸಿದಿರು ವುದರಿಂದ, ದಿಲ್ಲಿ ಸರಕಾರಕ್ಕೆ ಒಂದು ಪೆನ್ನು ಖರೀದಿಸುವುದಕ್ಕೂ ಸಾಧ್ಯವಾಗುತ್ತಿಲ್ಲವೆಂದು ಅವರು ದೂರಿದ್ದಾರೆ.
ಲೆ.ಗ. ನಝೀಬ್ ಜಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಲ್ಲೇ ಎಲ್ಲ ಅಧಿಕಾರ ಇರುವುದರಿಂದ ಸಾಂಕ್ರಾಮಿಕ ರೋಗದ ಸಮಸ್ಯೆಯ ಬಗ್ಗೆ ಅವರನ್ನೇ ಪ್ರಶ್ನಿಸಬೇಕೆಂದು ನಿನ್ನೆ ಪಂಜಾಬ್‌ನಿಂದ ಮರಳಿರುವ ಕೇಜ್ರಿವಾಲ್ ಹೇಳಿದ್ದಾರೆ.
ಮುಖ್ಯಮಂತ್ರಿ ಹಾಗೂ ಸಚಿವರಿಗೆ ಈಗ ಒಂದು ಪೆನ್ನು ಖರೀದಿಸಲೂ ಅಧಿಕಾರವಿಲ್ಲ. ಎಲ್.ಜಿ. ಹಾಗೂ ಪ್ರಧಾನಿಯೇ ದಿಲ್ಲಿಯ ಎಲ್ಲ ಅಧಿಕಾರವನ್ನು ಇರಿಸಿ ಕೊಂಡಿದ್ದಾರೆ. ದಿಲ್ಲಿಯ ಬಗ್ಗೆ ಅವರನ್ನೇ ಪ್ರಶ್ನಿಸಿ ಎಂದವರು ಟ್ವೀಟಿಸಿದ್ದಾರೆ.
ದಿಲ್ಲಿ ಭಾರೀ ಆರೋಗ್ಯ ಬಿಕ್ಕಟ್ಟಿನಿಂದ ನರಳುತ್ತಿವೆ. ಅಲ್ಲಿ ಚಿಕುನ್‌ಗುನ್ಯಾಕ್ಕೆ ಈಗಾಗಲೇ ಮೂವರು ಬಲಿಯಾಗಿದ್ದಾರೆ. ಕೇಜ್ರಿವಾಲ್ ಮನೀಶ್ ಸಿಸೋಡಿಯಾ ಸತ್ಯೇಂದರ್ ಜೈನ್, ಗೋಪಾಲ್ ರಾಯ್ ಹಾಗೂ ಇಮ್ರಾನ್ ಹುಸೈನ್ ಸಹಿತ ಸಚಿವರು ದಿಲ್ಲಿಯಲ್ಲಿ ಇಲ್ಲದಿರುವುದರಿಂದ ಅಕ್ಷರಶಃ ಇಡೀ ಸಂಪುಟವೇ ಕಾರ್ಯಾಚರಿಸುತ್ತಿಲ್ಲ.
ಕೇಜ್ರಿವಾಲ್ ಇಂದು ಗಂಟಲಿನ ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿಗೆ ಬರಲಿದ್ದರೆ, ಉಪಮುಖ್ಯಮಂತ್ರಿ ಸಿಸೋಡಿಯ, ಫಿನ್ಲೆಂಡ್‌ನ ಶಿಕ್ಷಣ ವ್ಯವಸ್ಥೆಯ ಅಧ್ಯಯನಕ್ಕೆ ಹೋಗಿದ್ದಾರೆ. ಆರೋಗ್ಯ ಸಚಿವ ಜೈನ್, ಚುನಾವಣಾ ಹೊಸ್ತಿಲಲ್ಲಿರುವ ಗೋವಾದ ಪ್ರವಾಸದಲ್ಲಿದ್ದರೆ, ರಾಯ್ ಛತ್ತೀಸ್‌ಗಡಕ್ಕೆ ಹಾಗೂ ಹುಸೈನ್ ಹಜ್ ಯಾತ್ರೆಗೆ ತೆರಳಿದ್ದಾರೆ. ಕೇವಲ ಜಲ ಪೂರೈಕೆ ಸಚಿವ ಕಪಿಲ್ ಮಿಶ್ರಾ ಒಬ್ಬರೇ ದಿಲ್ಲಿಯಲ್ಲಿದ್ದಾರೆ.
ದಿಲ್ಲಿಯಲ್ಲಿ ಚಿಕುನ್‌ಗುನ್ಯಾಕ್ಕೆ ನಿನ್ನೆ ಒಬ್ಬ ಹಾಗೂ ಇಂದು ಇಬ್ಬರು ಬಲಿಯಾಗಿರುವುದು ವರದಿಯಾಗಿದ್ದರೆ, ಡೆಂಗ್‌ನಿಂದ 9 ಹಾಗೂ ಮಲೇರಿಯದಿಂದ ಇಬ್ಬರು ಸಾವನ್ನಪ್ಪಿದ್ದಾರೆ.
ಕಳೆದ 18 ತಿಂಗಳ ಕಡತಗಳನ್ನು ಪರಿಶೀಲಿಸಿ ತನಗೆ ಕಳುಹಿಸುವಂತೆ ಜಂಗ್, ಆದೇಶ ನೀಡಿರುವುದರಿಂದ ಅಧಿಕಾರಿಗಳೆಲ್ಲ ಅದರಲ್ಲೇ ಮಗ್ನರಾಗಿದ್ದಾರೆ. ಸಚಿವರು ಕರೆದ ಸಭೆಗಳಿಗೂ ಅವರು ಬರುತ್ತಿಲ್ಲ. ಅಧಿಕಾರಿಗಳು ಇಡೀ ದಿನ ಕಚೇರಿಗಳಿಂದ ಹೊರಗಿರುತ್ತಾರೆ. ಮೋದಿ ಯವರ ಪತ್ರಿಕೋದ್ಯಮ ಶಾಲೆಯಲ್ಲಿ ಕಲಿಯದ ವರದಿಗಾರರು ಯಾರಾದರೂ ಇದ್ದರೆ, ದಿಲ್ಲಿ ಸರಕಾರದೊಡನೆ ಲೆಫ್ಟಿನೆಂಟ್ ಗವರ್ನರರೇ ಅಥವಾ ಮುಖ್ಯಮಂತ್ರಿಯೇ ಎಂದು ನಿರ್ಧರಿಸಲಿ ಎಂದು ಸಿಸೋಡಿಯಾ ಹೊಗೆಯುಗುಳಿದ್ದಾರೆ.
ದಿಲ್ಲಿಯ ಸಂಪೂರ್ಣ ಅಧಿಕಾರ ಎಲ್‌ಜಿಯ ಬಳಿಯಿದ್ದರೆ ಅವರೇ ಈ ಪ್ರಕರಣಗಳ ಹೊಣೆ ಹೊರಬೇಕಾಗುತ್ತದೆ. ಆರೋಗ್ಯ ಇಲಾಖೆಯಲ್ಲಿ ನಿಷ್ಪ್ರಯೋಜಕ ಹಾಗೂ ಸೋಮಾರಿ ಅಧಿಕಾರಿಗಳನ್ನು ಕುಳ್ಳಿರಿಸಿ ಎಲ್‌ಜಿ ಎಲ್ಲಿ ಮಾಯವಾಗಿದ್ದಾರೆ? ಎಂದವರು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.





