ಶಾಂತಿ-ಸುವ್ಯವಸ್ಥೆ ಕಾಪಾಡಲು ಸಹಕರಿಸಿ: ಪರಮೇಶ್ವರ್

* ಕಾವೇರಿ ಕಿಚಿ್ಚಗೆ 97 ವಾಹನಗಳು ಭಸ್ಮ
* 60 ವಾಹನಗಳು ಜಖಂ
* ಭದ್ರತೆಗೆ 20 ಕೇಂದ್ರ ಮೀಸಲು ಪಡೆ ನಿಯೋಜನೆ
ಬೆಂಗಳೂರು, ಸೆ. 13: ಕಾವೇರಿ ನದಿ ನೀರಿನ ಹಂಚಿಕೆ ಸಂಬಂಧ ಯಾವುದೇ ವದಂತಿಗಳಿಗೆ ಸಾರ್ವಜನಿಕರು ಕಿವಿಗೂಡಬಾರದು. ಶಾಂತಿ-ಸುವ್ಯವಸ್ಥೆ ಕಾಪಾಡಲು ಜನಸಾಮಾನ್ಯರು ಸರಕಾರದೊಂದಿಗೆ ಸಹಕರಿಸಬೇಕು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಇಂದಿಲ್ಲಿ ಮನವಿ ಮಾಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಮಂತ್ರಿ ಪರಿಷತ್ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಬಸ್ಸು-ಲಾರಿಗಳಿಗೆ ಬೆಂಕಿ ಹಾಗೂ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 335ಮಂದಿಯನ್ನು ಬಂಧಿಸಲಾಗಿದೆ ಎಂದರು.
ಬಸ್ಸು-ಲಾರಿಗಳಿಗೆ ಬೆಂಕಿ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಿದ ಪ್ರಕರಣ ಸಂಬಂಧ ಖಾಸಗಿ ಸುದ್ದಿ ವಾಹಿನಿಗಳ ವೀಡಿಯೊ ದೃಶ್ಯಾವಳಿಗಳನ್ನು ಆಧರಿಸಿ ತಪ್ಪಿತಸ್ಥರೆಲ್ಲರನ್ನು ಬಂಧಿಸಿ ಕಾನೂನು ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ಎಚ್ಚರಿಸಿದರು.
ನಗರದಲ್ಲಿ ನಿನ್ನೆ ಒಟ್ಟು 13 ಪ್ರದೇಶಗಳಲ್ಲಿ ಗುಂಪು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದು, 16 ಬಾರಿ ಆಶ್ರುವಾಯು ಸಿಡಿಸಿದ್ದು, ಒಟ್ಟು 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಧಿಸಿರುವ ‘ಕರ್ಪ್ಯೂ’ ಮುಂದುವರಿಯಲಿದೆ. ಅಲ್ಲದೆ, ನಗರದಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.
20 ಕೇಂದ್ರ ಸಶಸ್ತ್ರ ಪಡೆ: ನಗರದಲ್ಲಿನ ಭದ್ರತೆಗೆ ಒಟ್ಟು 20 ಕೇಂದ್ರ ಸಶಸ್ತ್ರ ಮೀಸಲು ಪಡೆಗಳು ಬಂದಿದ್ದು, ಹಿಂಸಾಗ್ರಸ್ತ ಸೂಕ್ಷ್ಮ ಪ್ರದೇಶಗಳಲ್ಲಿನ ಭದ್ರತೆಗೆ ನಿಯೋಜಿಸಲಾಗಿದೆ. ಕರ್ಪ್ಯೂ ವಿಸ್ತರಣೆ ಸಂಬಂಧ ಸ್ಥಳೀಯ ಮಾಹಿತಿಯನ್ನು ಆಧರಿಸಿ ನಗರ ಪೊಲೀಸ್ ಆಯುಕ್ತರು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ವಾಹನಗಳು ಭಸ್ಮ: ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಬಸ್ಸು, ಲಾರಿ, ದ್ವಿಚಕ್ರ ವಾಹನಗಳು ಸೇರಿ ಒಟ್ಟು 97 ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಸುಮಾರು 60ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ ಎಂದು ಪರಮೇಶ್ವರ್ ಇದೇ ವೇಳೆ ಮಾಹಿತಿ ನೀಡಿದರು.
ಬೆಂಗಳೂರು ನಗರದಲ್ಲಿ ಇಂದು ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನಗರದ ಮೈಸೂರು ರಸ್ತೆ, ಹೆಗ್ಗನಹಳ್ಳಿ ಸೇರಿದಂತೆ ಎಲ್ಲೆಡೆ ಪರಿಸ್ಥಿತಿ ಶಾಂತವಾಗಿದೆ. ಅಲ್ಲಲ್ಲಿ ಕೆಲ ಸಣ್ಣ ಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಯಾವುದೇ ಕೃತ್ಯಗಳು ಸಂಭವಿಸಿಲ್ಲ. ಎಲ್ಲೆಡೆ ಬಿಗಿ ಪೊಲೀಸ್ ಬಂದೋ ಬಸ್ತ್ ಕಲ್ಪಿಸಲಾಗಿದೆ. ಕನ್ನಡಿಗರು-ತಮಿಳು ಭಾಷಿಕರು ಸೇರಿದಂತೆ ಯಾರೊಬ್ಬರೂ ಆತಂಕಪಡುವ ಅಗತ್ಯವಿಲ್ಲ ಎಂದು ಆಭಯ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕಾನೂನು ಕೈಗೆತ್ತಿಕೊಳ್ಳವ ದುಷ್ಟ ಶಕ್ತಿಗಳ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಪೊಲೀಸ್ ಎಸ್ಕಾರ್ಟ್: ತಮಿಳುನಾಡಿನ ನೋಂದಣಿ ಸಂಖ್ಯೆಯುಳ್ಳ ಲಾರಿ, ಬಸ್ಸುಗಳು ಸೇರಿದಂತೆ 300ಕ್ಕೂ ಹೆಚ್ಚು ವಾಹನಗಳಿಗೆ ಪೊಲೀಸ್ ಭದ್ರತೆಯಲ್ಲಿ ಹೊಸೂರಿನ ಗಡಿಭಾಗಕ್ಕೆ ಕಳುಹಿಸಲಾಗಿದೆ ಎಂದು ಅವರು, ಹಿಂಸಾಚಾರದ ಹಿನ್ನೆಲೆಯಲ್ಲಿ ಎಷ್ಟು ಮೊತ್ತದ ನಷ್ಟ ಉಂಟಾಗಿದೆ ಎಂಬುದನ್ನು ಇನ್ನೂ ಅಂದಾಜು ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಕಾವೇರಿ ನದಿ ನೀರಿನ ಹಂಚಿಕೆ ಸಂಬಂಧ ಸುದ್ದಿವಾಹಿನಿಗಳಲ್ಲಿ ಬಿತ್ತರಗೊಂಡ ‘ಸುದ್ದಿ’ಗಳ ಹಿನ್ನೆಲೆಯಲ್ಲಿ ಪ್ರಚೋದನೆಗೆ ಒಳಗಾಗಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಲಾಗಿದೆ ಎಂಬ ವರದಿಗಳಿವೆ. ಆ ಹಿನ್ನೆಲೆಯಲ್ಲಿ ಖಾಸಗಿ ಸುದ್ದಿ ವಾಹಿನಿಗಳು ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು ಸಹಕರಿಸಬೇಕು.
-ಡಾ.ಜಿ.ಪರಮೇಶ್ವರ್ ಗೃಹ ಸಚಿವ





