ಬೆಂಗಳೂರು, ಮೈಸೂರು, ಮಂಡ್ಯಕ್ಕೆ ಜೂನ್‌ವರೆಗೆ ಕುಡಿಯುವ ನೀರು

ಬೆಂಗಳೂರು, ಸೆ.13: ರಾಜ್ಯದ ಕಾವೇರಿ ಕಣಿವೆಯಿಂದ ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನೀರು ಬಿಡುವುದರ ಜೊತೆಗೆ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಮುಂದಿನ ವರ್ಷದ ಜೂನ್ ವರೆಗೆ ಎಲ್ಲರಿಗೂ ಕುಡಿಯುವ ನೀರು ಒದಗಿಸುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ತುರ್ತು ಮಂತ್ರಿ ಪರಿಷತ್ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ಆದೇಶದಂತೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗುವುದು. ಸೋಮವಾರದ ನ್ಯಾಯಾಲಯದ ಮಾರ್ಪಡಿತ ಆದೇಶದಿಂದ ರಾಜ್ಯದ ಕಾವೇರಿಯಿಂದ ತಮಿಳುನಾಡಿಗೆ 18 ಸಾವಿರ ಕ್ಯೂಸೆಕ್ಸ್ ನೀರನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡುವ ಅನಿವಾರ್ಯತೆ ಎದುರಾಗಿದೆ.
ಅದೇ ರೀತಿ, ರಾಜ್ಯದ ಕಾವೇರಿ ಕಣಿವೆಯ ರೈತರಿಗೆ ನೀರಾವರಿ ಸಮನ್ವಯ ಸಮಿತಿಯಲ್ಲಿ ಈಗಾಗಲೇ ನೀಡಿರುವ ವಾಗ್ದಾನದಂತೆ ಕೃಷಿ ಬೆಳೆಗಳಿಗೂ ನೀರು ಒದಗಿಸಲಾಗುವುದು. ಕೆಲವು ಸಂಘಟನೆಗಳು ನ್ಯಾಯಾಂಗದ ಮೇಲೆ ಅವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ತಮಗೆ ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಪುನರುಚ್ಛರಿಸಿದರು. ಸಂಕಷ್ಟ ಪರಿಸ್ಥಿತಿಯ ಬಗ್ಗೆ ನ್ಯಾಯಾಧಿಕರಣ ಎಲ್ಲೂ ಸ್ಪಷ್ಟನೆ ನೀಡದೆ ಇರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜಲ ನೀತಿಯಿಂದ ಉಭಯ ರಾಜ್ಯಗಳ ನೀರು ಹಂಚಿಕೆ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಸಾಧ್ಯ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಈ ಎಲ್ಲ್ಲ ವಿಷಯಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೊತೆಗಿನ ತಮ್ಮ ಭೇಟಿಯ ಸಂದರ್ಭದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ ಅವರು, ಮಾಜಿ ಸಿಎಂ ಎಸ್.ಬಂಗಾರಪ್ಪ 1991ರಲ್ಲಿ ನ್ಯಾಯಾಧಿಕರಣದ ಮಧ್ಯಾಂತರ ಆದೇಶವನ್ನು ತಿರಸ್ಕರಸಿ ಸುಗ್ರೀವಾಜ್ಞೆ ಹೊರಡಿಸಿದ್ದರು. ಅದು ನ್ಯಾಯಾಲಯದ ಆದೇಶವಲ್ಲ ಎಂದು ಪ್ರತಿಕ್ರಿಯಿಸಿದರು.
ಇದೀಗ ನ್ಯಾಯಾಧಿಕರಣ ಅಂತಿಮ ತೀರ್ಪು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ರಾಜ್ಯಕ್ಕೆ ಆದೇಶಿಸಿದೆ. ಅಂದಿನ ಆ ಪ್ರಸ್ತಾಪ ಹಾಗೂ ಇಂದಿನ ಈ ಪ್ರಸ್ತಾವ ಬೇರೆ ಬೇರೆಯಾಗಿವೆ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.





