‘ಎತ್ತಿನಹೊಳೆ ವಿರುದ್ಧ ಧ್ವನಿಯೆತ್ತದಿದ್ದರೆ ನೇತ್ರಾವತಿಯೂ ಮುಂದಿನ ಕಾವೇರಿಯಾದೀತು’
ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿ

ಉಪ್ಪಿನಂಗಡಿ, ಸೆ.13: ಕರಾವಳಿ ಜಿಲ್ಲೆಯನ್ನು ಬರಡಾಗಿಸುವ ಎತ್ತಿನಹೊಳೆ ಯೋಜನೆಯ ವಿರುದ್ಧ ಈ ಭಾಗದ ಪ್ರತಿಯೋರ್ವರು ಧ್ವನಿಯೆತ್ತದಿದ್ದರೆ, ಮುಂದೊಂದು ದಿನ ನೇತ್ರಾವತಿಯು ಮತ್ತೊಂದು ಕಾವೇರಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿಯೋರ್ವರು ಜಾಗೃತರಾಗಿ ನೇತ್ರಾವತಿ ನದಿ ತಿರುವನ್ನು ತಡೆಯಬೇಕಾಗಿದೆ ಎಂದು ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಡಾ. ನಿರಂಜನ್ ರೈ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯೆಂಬುದು ಅವೈಜ್ಞಾನಿಕ ಯೋಜನೆಯಾಗಿದ್ದು, ಇದಕ್ಕೆ ಬಯಲು ಸೀಮೆಯಲ್ಲಿಯೇ ವಿರೋಧವಿದೆ. ಅಲ್ಲಿನವರು ಬಯಲು ಸೀಮೆಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ರೂಪಿಸಿಕೊಂಡು ಆರ್. ಆಂಜನೇಯ ರೆಡ್ಡಿಯವರನ್ನು ಅದರ ಅಧ್ಯಕ್ಷರನ್ನಾಗಿ ಮಾಡಿ, ಅವರ ನೇತೃತ್ವದಲ್ಲಿ ಹೋರಾಟವನ್ನು ನಡೆಸುತ್ತಿದ್ದಾರೆ. ಅವರೇ ಹೇಳುವಂತೆ, ಎತ್ತಿನಹೊಳೆ ಯೋಜನೆಯಿಂದ 1 ಟಿಎಂಸಿ ನೀರು ಮಾತ್ರ ಲ್ಯವಾಗಲಿದೆ ಎಂದು ನೀರಾವರಿ ತಜ್ಞರೇ ಹೇಳಿದ್ದರೂ, ಸರಕಾರ ಮಾತ್ರ ಈ ಯೋಜನೆಯಿಂದ ಬೆಂಗಳೂರು ನಗರ, ಕೈಗಾರಿಕೆಗಳು ಸೇರಿದಂತೆ ಕೆಲವು ಜಿಲ್ಲೆಗಳಿಗೆ ಸುಮಾರು 24 ಟಿಎಂಸಿ ನೀರು ದೊರೆಯಲಿದೆ ಎಂದು ಸುಳ್ಳು ರವಸೆ ನೀಡುತ್ತಿದೆ.
ಈ ಯೋಜನೆ ಸಂಪೂರ್ಣ ಅವೈಜ್ಞಾನಿಕವಾದದ್ದು ಎಂಬ ಮಾಹಿತಿ ಸರಕಾರಕ್ಕೆ ಇದ್ದರೂ ಯೋಜನೆಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ಸರಕಾರ ವೆಚ್ಚ ಮಾಡುತ್ತಿದೆ ಎಂದು ಆರೋಪಿಸುತ್ತಾರೆ. ಅಲ್ಲದೇ, ನಮಗೆ ನೀರು ಸಿಗದ ಎತ್ತಿನಹೊಳೆ ಯೋಜನೆ ಬೇಡ. ಇಲ್ಲಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಕೊಡಿ ಎಂದು ಆಗ್ರಹಿಸುತ್ತಿರುವ ಹೋರಾಟ ಸಮಿತಿಯವರು ನದಿಯನ್ನು ತಿರುಗಿಸುವ ಬದಲು ಮಳೆಕೊಯ್ಲು, ಕೆರೆಗಳ ಪುನಶ್ಚೇತನಗೊಳಿಸುವುದು ಮುಂತಾದ ಕಾರ್ಯಕ್ಕೆ ಸರಕಾರ ಮುಂದಾಗಲಿ. ಆಗ ಮಾತ್ರ ಈ ಬಾಗಕ್ಕೆ ಶಾಶ್ವತ ನೀರಾವರಿ ಲಭಿಸಲು ಸಾಧ್ಯ ಎಂದು ಒತ್ತಾಯಿಸುತ್ತಿದ್ದಾರೆ. ಆದರೂ ಇದನ್ನು ಕಿವಿಗೆ ಹಾಕಿಕೊಳ್ಳದ ಸರಕಾರ ಕರಾವಳಿ ಜಿಲ್ಲೆಗಳ ಸರ್ವನಾಶಕ್ಕೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಡಿಯಲು ನೀರು ಕೊಡುವುದಕ್ಕೆ ನಮ್ಮದೇನು ಅ್ಯಂತರವಿಲ್ಲ. ಆದರೆ, ನಮ್ಮ ನದಿ ಮೂಲಕ್ಕೆ, ಇಲ್ಲಿನ ಪರಿಸರಕ್ಕೆ ಧಕ್ಕೆ ತಂದು ನೀರು ಕೊಡುವುದಕ್ಕೆ ಮಾತ್ರ ನಮ್ಮದು ತೀವ್ರ ವಿರೋಧವಿದೆ. ನದಿ ತಿರುವು ಎಂದರೆ ಹಾಲು ಕೊಡುವ ಹಸುವಿನ ಕತ್ತು ಕೊಯ್ದಂತೆ. ನದಿಯನ್ನು ತಿರುಗಿಸಿದಾಗ ಈ ಭಾಗದ ನೀರಸೆಲೆಗಳು ಬತ್ತಿ ಹೋಗಿ, ಈ ಬಾಗ ತೀವ್ರ ಜಲಕ್ಷಾಮಕ್ಕೆ ತುತ್ತಾಗುವ ಸಾಧ್ಯತೆಯಿದೆ. ಅಲ್ಲದೆ, ಅದೆಷ್ಟೋ ಮೀನುಗಾರರ, ಕೃಷಿಕರ ಬದುಕು ಇದಕ್ಕೆ ಬಲಿಯಾಗಲಿದೆ. ಈ ಯೋಜನೆಯ ಕಾಮಗಾರಿಯಿಂದ ಹಚ್ಚಹಸುರಿನಿಂದ ಕಂಗೊಳಿಸುತ್ತಿರುವ ಪಶ್ಚಿಮಘಟ್ಟ ನಾಶವಾಗಲಿದೆ. ಇದು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆಯಲ್ಲದೆ, ಕಾಡಿನೊಳಗಿರುವ ಜೀವಸಂಕುಲಗಳು ನಾಡಿನತ್ತ ಮುಖಮಾಡಲಿವೆ. ಹೀಗೆ ಈ ಎಲ್ಲಾ ಅನಾಹುತಗಳ ನೇರ ಪರಿಣಾಮ ಒಟ್ಟು ಜನಸಮೂಹದ ಮೇಲೆ ಆಗಲಿದೆ ಎಂದು ಡಾ. ನಿರಂಜನ್ ರೈ ಆತಂಕ ವ್ಯಕ್ತಪಡಿಸಿದರು.
ಎಚ್ಚರಿಸುವ ಕೆಲಸವಾಗಿದೆ: ಕಳೆದ ಬೇಸಿಗೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ತೀವ್ರ ಬರಗಾಲಕ್ಕೆ ತುತ್ತಾಗಿತ್ತು. ಜಿಲ್ಲೆಯ ಜೀವನದಿಗಳಾದ ನೇತ್ರಾವತಿ- ಕುಮಾರಧಾರ ನದಿಗಳು ಬತ್ತಿ ಹೋಗಿ ತಮ್ಮ ಹರಿಯುವಿಕೆಯನ್ನೇ ನಿಲ್ಲಿಸಿದ್ದವು. ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಬಳಿಯಿರುವ ಸಂಗಮ ಕ್ಷೇತ್ರದ ಬಳಿ ಉಭಯ ನದಿಗಳು ಸಂಗಮವಾಗುವುದೇ ನಿಂತು ಹೋಗಿತ್ತು. ಮಂಗಳೂರಿಗರಿಗೆ ನೀರುಣಿಸುವ ತುಂಬೆ ಡ್ಯಾಂನಲ್ಲಿ ನೀರು ಬತ್ತಿ ಹೋಗಿದ್ದರಿಂದ ಮಂಗಳೂರಿನ ಜನತೆ ತೀವ್ರ ಜಲಕ್ಷಾಮ ಎದುರಿಸಬೇಕಾಯಿತು. ಇದೆಲ್ಲಾ ಪ್ರಕೃತಿ ಮುನಿಯುವ ಮೊದಲು ನಮಗೆ ನೀಡಿದ ಎಚ್ಚರಿಕೆಯಾಗಿದ್ದು, ಇನ್ನು ನಾವು ಎಚ್ಚೆತ್ತುಕೊಳ್ಳದಿದ್ದರೆ, ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಈ ಹಿಂದೆ ಕಾವೇರಿ ನದಿ ನೀರಿನಲ್ಲಿ ತಮಿಳುನಾಡಿಗೂ ಪಾಲಿದೆ ಎಂದು ಒಪ್ಪಂದ ಮಾಡಿಕೊಂಡಿದ್ದರಿಂದ ಇಂದು ಕರ್ನಾಟಕಕ್ಕೆ ಈ ಸ್ಥಿತಿ ಬಂದಿದೆ. ನೇತ್ರಾವತಿ ನದಿ ತಿರುವು ಯೋಜನೆಗೆ ನಾವು ಪ್ರಬಲ ವಿರೋಧ ವ್ಯಕ್ತಪಡಿಸದಿದ್ದರೆ, ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆಯೂ ಇಂದು ಕಾವೇರಿ ನೀರನ್ನವಲಂಬಿಸಿರುವ ಕರ್ನಾಟಕ ಜನತೆ ಸಮಸ್ಯೆಗೆ ತುತ್ತಾದಂತೆ ಸಮಸ್ಯೆಗೆ ತುತ್ತಾಗಲಿದೆ. ಆಗ ಆ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಈಜಾಡಬೇಕೇ ಹೊರತು ದಡ ಸೇರಲು ಸಾಧ್ಯವಿಲ್ಲ ಎಂದು ಡಾ. ನಿರಂಜನ್ ರೈ ಎಚ್ಚರಿಸಿದರಲ್ಲದೆ, ನೇತ್ರಾವತಿ (ಎತ್ತಿನಹೊಳೆ) ನದಿ ತಿರುವು ಯೋಜನೆಯಿಂದಾಗುವ ತೊಂದರೆಗಳೇನು ಎಂಬ ಬಗ್ಗೆ ಜನಸಾಮಾನ್ಯರು ಅರಿತುಕೊಳ್ಳಬೇಕು ಎಂಬ ಉದ್ದೇಶದಿಂದ ಸೆ.15ರಂದು ಮಧ್ಯಾಹ್ನ 3ಗಂಟೆಗೆ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂನಲ್ಲಿ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದರಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಸೇರಿದಂತೆ ಪರಿಸರ ಹೋರಾಟಗಾರರು, ಕಾನೂನು ತಜ್ಞರು ಭಾಗವಹಿಸಲಿದ್ದಾರೆ.
ಆದ್ದರಿಂದ ಕರಾವಳಿ ಭಾಗದ ಜನತೆ ಇದರಲ್ಲಿ ಬಾಗವಹಿಸಿ, ನೇತ್ರಾವತಿ ನದಿ ತಿರುವಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಕಾನೂನಾತ್ಮಕ ಹೋರಾಟದಲ್ಲಿ ನಮ್ಮ ಮುಂದಿನ ನಡೆಯ ಬಗ್ಗೆ ಮಾಹಿತಿಯನ್ನು ಕರಾವಳಿಯುದ್ದಕ್ಕೂ ಪಸರಿಸುವ ಮೂಲಕ ಇಲ್ಲಿನ ಜನತೆಯನ್ನು ಜಾಗೃತಿಗೊಳಿಸುವ ಕಾರ್ಯ ಮಾಡಬೇಕಿದೆ ಎಂದು ಮನವಿ ಮಾಡಿದರು.







