ನಗರಕ್ಕೆ ಅರೆಸೇನಾ ಪಡೆ ಆಗಮನ, ಕಿಡಿಗೇಡಿಗಳ ಬಂಧನ
ಬೆಂಗಳೂರು ಪ್ರಕ್ಷುಬ್ಧ; 16 ಪ್ರದೇಶಗಳಲ್ಲಿ ಕರ್ಫ್ಯೂ ಜಾರಿ

ಬೆಂಗಳೂರು, ಸೆ.13: ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕದ ವಿರುದ್ಧ ಸುಪ್ರೀಂಕೋರ್ಟ್ ಆದೇಶ ಬಂದ ನಂತರ ನಗರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ 16 ಬಡಾವಣೆಗಳಲ್ಲಿ ಸೆ.13ರಿಂದ 14ರವರೆಗೆ ಕರ್ಫ್ಯೂ ಜಾರಿ ಮಾಡಲಾಗಿದ್ದು, ಕಂಡಲ್ಲಿ ಗುಂಡಿಗೆ ಆದೇಶ ನೀಡಲಾಗಿದೆ. ಕರ್ಫ್ಯೂ ಜಾರಿಯನ್ನು ರಾಜರಾಜೇಶ್ವರಿನಗರ, ಕೆ.ಪಿ.ಅಗ್ರಹಾರ, ಚಂದ್ರಾಲೇಔಟ್, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಪೀಣ್ಯ, ಆರ್‌ಎಂಸಿ ಯಾರ್ಡ್, ನಂದಿನಿ ಲೇಔಟ್, ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿ, ರಾಜಗೋಪಾಲನಗರ, ಕಾಮಾಕ್ಷಿಪಾಳ್ಯ, ವಿಜಯನಗರ, ಬ್ಯಾಟರಾಯನಪುರ, ಕೆಂಗೇರಿ, ಮಾಗಡಿ ರಸ್ತೆ ಮತ್ತು ರಾಜಾಜಿನಗರದಲ್ಲಿ ಮಾಡಲಾಗಿದೆ. ಹೀಗಾಗಿ, ಕರ್ಫ್ಯೂ ಜಾರಿಯಿರುವ ಸಮಯದಲ್ಲಿ ಯಾರೂ ಮನೆಯಿಂದ ಹೊರಬರಬಾರದೆಂದು ನಗರ ಪೊಲೀಸ್ ಆಯುಕ್ತರು ಆದೇಶ ನೀಡಿದ್ದಾರೆ. ಸೋಮವಾರ ಮಧ್ಯಾಹ್ನದ ನಂತರ ನಗರದಾದ್ಯಂತ ವ್ಯಾಪಕ ಹಿಂಸಾಚಾರ ನಡೆದು, 95ಕ್ಕೂ ಹೆಚ್ಚು ತಮಿಳುನಾಡು ನೋಂದಣಿಯ ವಾಹನಗಳು ಬೆಂಕಿಗೆ ಆಹುತಿಯಾದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಈ ಬಡಾವಣೆಗಳಲ್ಲಿ ಜನರು ಮನೆಯಿಂದ ಹೊರಬರಬಾರದು. ಯಾವುದೇ ಅಹಿತಕರ ಘಟನೆಗೆ ಜನರು ಇಳಿದರೆ ಪೊಲೀಸರು ಅನಿವಾರ್ಯವಾಗಿ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ನಗರಕ್ಕೆ ಅರೆಸೇನಾಪಡೆ:
ಕಾವೇರಿ ಕಿಡಿಯಲ್ಲಿ ಬೆಂಗಳೂರು ಹೊತ್ತಿ ಉರಿದಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕರ್ಫ್ಯೂ ಹೇರಲಾಗಿದೆ. ನಾಳೆಯವರೆಗೆ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಮಹಾನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ನಗರಕ್ಕೆ ಹೆಚ್ಚುವರಿ ಅರೆಸೇನಾ ಪಡೆಗಳನ್ನು ಕೇಂದ್ರ ಸರಕಾರ ಕಳುಹಿಸಿಕೊಟ್ಟಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಕೈಗಾರಿಕಾ ಭದ್ರತಾ ದಳದ 20 ತುಕಡಿಗಳು ನಗರಕ್ಕೆ ಆಗಮಿಸಿವೆ. ಸಿವಿಎಲ್, ಕ್ಷಿಪ್ರ ಕಾರ್ಯಾಚರಣೆ ಪಡೆ, ಕೆಎಸ್ಸಾರ್ಪಿ ಸೇರಿದಂತೆ 15 ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆ ಸಂಬಂಧ ತಡರಾತ್ರಿವರೆಗೂ ಡಿಜಿಪಿ ಕಚೇರಿಯಲ್ಲಿ ಸಭೆ ನಡೆಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪೊಲೀಸ್ ವೈಫಲ್ಯವನ್ನು ಒಪ್ಪಿಕೊಂಡಿಲ್ಲ. ದಾಂಧಲೆಯಲ್ಲಿ ತೊಡಗಿದ್ದವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ. ಈ ಹಿಂದೆ ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಕೂಡಲೇ ಮನೆಗೆ ಸೇರಿಕೊಳ್ಳಿ, ಗುಂಪು ಕಟ್ಕೊಂಡು ನಿಂತ್ಕೋಬೇಡಿ ಅನ್ನೋ ಸಂದೇಶವನ್ನು ಸೆ.13ರ ಬೆಳಗ್ಗೆ ಪೊಲೀಸರು ಮೈಕ್ ಮೂಲಕ ಹೇಳುತ್ತಿದ್ದಾರೆ. ನಗರದಲ್ಲಿ ಬಿಎಂಟಿಸಿ ಬಸ್‌ಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿದೆ. ಹೊರ ಊರುಗಳಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ. ತಮಿಳುನಾಡು-ಕರ್ನಾಟಕ ನಡುವೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಕೂಡಾ ಸ್ಥಗಿತಗೊಂಡಿದೆ. ಮೆಟ್ರೋ ರೈಲುಗಳ ಓಡಾಟ ಎರಡನೇ ದಿನವೂ ರದ್ದಾಗಿದೆ. ಬಕ್ರೀದ್ ಹಿನ್ನೆಲೆಯಲ್ಲಿ ಇವತ್ತು ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬೆಂಗಳೂರು ವಿವಿ ನಡೆಸುತ್ತಿರುವ ದ್ವಿತೀಯ ಬಿಎ ಮತ್ತು ಬಿಕಾಂ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹೊಸ ದಿನಾಂಕವನ್ನು ಮುಂದೆ ಪ್ರಕಟಿಸುವುದಾಗಿ ವಿವಿ ಹೇಳಿದೆ. ಇವತ್ತು ನಡೆಯಬೇಕಿದ್ದ ಕೆಎಸ್‌ಒಯು ಪರೀಕ್ಷೆಯ ಮುಂದೂಡಿಕೆಯಾಗಿದೆ.
ಇಂದು ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ
ಸೆ.14ರಂದು ಕರ್ಫ್ಯೂ ಹಾಗೂ ನಿಷೇಧಾಜ್ಞೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲಾ ಅನುದಾನ ರಹಿತ ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಅನುದಾನ ರಹಿತ ಶಾಲಾ ಕಾಲೇಜುಗಳ ಒಕ್ಕೂಟದ ಕಾರ್ಯದರ್ಶಿ ಕುಮಾರ್ ಈ ವಿಷಯವನ್ನು ಸ್ಪಷ್ಟ ಪಡಿಸಿದ್ದಾರೆ. ಕಾವೇರಿ ಗಲಭೆ ಹಿನ್ನೆಲೆಯಲ್ಲಿ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎಂಬ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.







