ಅಚ್ಛೇದಿನ್ ಘೋಷಣೆ ಗಂಟಲ ಮುಳ್ಳಾಗಿದೆ, ಅದು ಯಾವತ್ತೂ ಬರುವುದಿಲ್ಲ ಎಂದ ಗಡ್ಕರಿ !

ಹೊಸದಿಲ್ಲಿ, ಸೆ. 13 : ಕೇಂದ್ರ ಸಾರಿಗೆ ಹಾಗು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ವಿವಾದಾಸ್ಪದ ಹೇಳಿಕೆಯೊಂದನ್ನು ನೀಡಿದ್ದು ಇದು ಪ್ರಧಾನಿ ನರೇಂದ್ರ ಮೋದಿ ಹಾಗು ಅವರ ಸರಕಾರಕ್ಕೆ ಭಾರೀ ಇರಿಸುಮುರುಸು ಉಂಟು ಮಾಡುವ ಸಾಧ್ಯತೆ ಇದೆ.
"ಮನಮೋಹನ್ ಸಿಂಗ್ ಅವರು ಅಚ್ಛೇ ದಿನ್ ಬಗ್ಗೆ ಮಾತನಾಡಿದ್ದರು. ಆದರೆ ಈಗ ಅದು ನಮ್ಮ ಗಂಟಲ ಮುಳ್ಳಾಗಿಬಿಟ್ಟಿದೆ. ಅಚ್ಚೇದಿನ್ ಯಾವತ್ತೂ ಬರುವುದಿಲ್ಲ, ಅಚ್ಛೇದಿನ್ ನಮ್ಮ ಗ್ರಹಿಕೆಯಿಂದ ಬರುತ್ತದೆ ಅಷ್ಟೇ " ಎಂದು ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಸತತವಾಗಿ ಹಾಗು ಅಭೂತಪೂರ್ವ ಜಯಗಳಿಸಿದ ಮೇಲೆ ಮೋದಿ ಅವರು "ಅಚ್ಛೇ ದಿನ್ ಆನೆ ವಾಲೆ ಹೈ " ಎಂದು ಹೇಳಿದ್ದರು. ಅದು ಇಂದಿನವರೆಗೂ ಚರ್ಚೆಯಲ್ಲಿದೆ. ಬಿಜೆಪಿ ಬೆಂಬಲಿಗರು ಆ ಘೋಷಣೆಯಂತೆ ಮೋದಿಯಿಂದ ದೇಶಕ್ಕೆ ಒಳ್ಳೆಯ ದಿನಗಳು ಬರುತ್ತಿವೆ ಎಂದು ವಾದಿಸಿದರೆ, ವಿಪಕ್ಷಗಳು ಜನತೆಯ ಪಾಲಿಗೆ ಮೋದಿಯ ಅಚ್ಛೇದಿನ್ ಈವರೆಗೂ ಬಂದಿಲ್ಲ , ಬರುವುದೂ ಇಲ್ಲ " ಎಂದು ಟೀಕಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಮೋದಿ ಸಂಪುಟದ ಪ್ರಭಾವಿ ಸಚಿವರೇ ಹೀಗೆ ಹೇಳಿಕೆ ನೀಡಿದ್ದಾರೆ.
"ಅನಿವಾಸಿ ಭಾರತೀಯರೊಬ್ಬರು ಕೇಳಿದಾಗ ಮಾಜಿ ಪ್ರಧಾನಿ ಮನಮೋಹನ್ ಅವರು "ಅಚ್ಛೇದಿನ್ ಬರಲಿವೆ " ಎಂದು ಹೇಳಿದ್ದರು ಎಂದು ಪ್ರಧಾನಿ ಮೋದಿಯವರೇ ನನಗೆ ಹೇಳಿದ್ದಾರೆ. ಈ ದೇಶ ಅತೃಪ್ತ ಮಹಾ ಆತ್ಮಗಳ ಸಾಗರವಾಗಿದೆ. ಇಲ್ಲಿ ಸೈಕಲ್ ಇರುವವನಿಗೆ ಬೈಕ್ ಬೇಕು, ಬೈಕ್ ಇರುವವನಿಗೆ ಕಾರು ಬೇಕು " ಎಂದು ಜನರನ್ನೇ ಅಣಕಿಸಿದ್ದಾರೆ ಗಡ್ಕರಿ.
ಈ ಹಿಂದೆ " ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬ ಭಾರತೀಯನಿಗೆ 15 ಲಕ್ಷ ನೀಡುವ ಮೋದಿ ಭರವಸೆ" ಕೇವಲ ಚುನಾವಣಾ ಪ್ರಚಾರ ತಂತ್ರವಾಗಿತ್ತು ಎಂದು ಖುದ್ದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರೇ ಹೇಳಿದ್ದು ವಿವಾದವಾಗಿತ್ತು.







