‘ವಾಣಿಜ್ಯ ಮಾರ್ಗ ಮುಚ್ಚುವ ಅಫ್ಘಾನ್ ಬೆದರಿಕೆಗೆ ಪಾಕ್ ಮಣಿಯದು’
ಇಸ್ಲಾಮಾಬಾದ್, ಸೆ. 13: ವಾಘಾ ಗಡಿಯ ಮೂಲಕ ಭಾರತದೊಂದಿಗೆ ವ್ಯಾಪಾರ ನಡೆಸಲು ಅಫ್ಘಾನಿಸ್ತಾನಕ್ಕೆ ಪಾಕಿಸ್ತಾನ ಅವಕಾಶ ನೀಡದಿದ್ದರೆ, ಮಧ್ಯ ಏಶ್ಯ ದೇಶಗಳೊಂದಿಗಿನ ಪಾಕಿಸ್ತಾನದ ವ್ಯಾಪಾರ ಮಾರ್ಗವನ್ನು ಮುಚ್ಚುವುದಾಗಿ ಇತ್ತೀಚೆಗೆ ಅಫ್ಘಾನಿಸ್ತಾನ ಹಾಕಿರುವ ಬೆದರಿಕೆಯನ್ನು ಪಾಕಿಸ್ತಾನ ಲೆಕ್ಕಿಸಿಲ್ಲ ಎಂದು ಪಾಕಿಸ್ತಾನದ ಪತ್ರಿಕೆ ‘ಡಾನ್’ ಹೇಳಿದೆ.
ಅಫ್ಘಾನ್ ಅಧ್ಯಕ್ಷ ಅಶ್ರಫ್ ಗನಿ ಅವರ ಬೇಡಿಕೆಯನ್ನು ಪಾಕಿಸ್ತಾನ ಮನ್ನಿಸುವ ಪ್ರಶ್ನೆಯೇ ಇಲ್ಲ ಎಂದು ಪಾಕಿಸ್ತಾನ ಸರಕಾರದ ಉನ್ನತ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.
ವಾಸ್ತವಿಕವಾಗಿ, ಭಾರತಕ್ಕೆ ವಿನಾಯಿತಿಗಳನ್ನು ನೀಡುವಂತೆ ಗನಿ ಕೇಳುತ್ತಿದ್ದಾರೆ ಎಂದು ಅಧಿಕಾರಿ ಹೇಳಿದರು.
ತನ್ನ ವಸ್ತುಗಳನ್ನು ಭಾರತಕ್ಕೆ ಸಾಗಿಸಲು ಅಫ್ಘಾನಿಸ್ತಾನದ ಟ್ರಕ್‌ಗಳಿಗೆ ಈಗಾಗಲೇ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದರು. ಆದರೆ, ಭಾರತೀಯ ವಸ್ತುಗಳನ್ನು ತರಲು ಅವುಗಳಿಗೆ ಅವಕಾಶ ಇಲ್ಲ ಅಷ್ಟೆ ಎಂದರು.
ಭಾರತದೊಂದಿಗಿನ ಸಂಬಂಧ ಹದಗೆಡುತ್ತಿರುವ ಹಿನ್ನೆಲೆಯಲ್ಲಿ, ಈ ಹಂತದಲ್ಲಿಇದಕ್ಕೆ ಪಾಕಿಸ್ತಾನ ಸರಕಾರ ಅವಕಾಶ ನೀಡುವ ಯಾವುದೇ ಸಾಧ್ಯತೆ ಇಲ್ಲ ಎಂದು ಹಿರಿಯ ಸರಕಾರಿ ಅಧಿಕಾರಿ ತಿಳಿಸಿದರು.







