ಸಿರಿಯವನ್ನು ಖಂಡಿಸಿದ ವಿಶ್ವಸಂಸ್ಥೆ ಮಾನವಹಕ್ಕು ಮುಖ್ಯಸ್ಥ
ಜಿನೇವ, ಸೆ. 13: ಮಾನವಹಕ್ಕು ಉಲ್ಲಂಘನೆಗಳಿಗಾಗಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಮಿಶನರ್ ಝೈದ್ ರಅದ್ ಅಲ್ ಹುಸೈನ್ ಮಂಗಳವಾರ ಸಿರಿಯ ಸರಕಾರವನ್ನು ಖಂಡಿಸಿದ್ದಾರೆ.
‘‘ಇದು ವೈದ್ಯರೊಬ್ಬರ ನೇತೃತ್ವದ ದೇಶ. ಆದಾಗ್ಯೂ, ಅದು ತನ್ನದೇ ಜನರ ಮೇಲೆ ಅನಿಲ ಬಿಟ್ಟಿದೆ ಎಂದು ನಂಬಲಾಗಿದೆ. ಅದು ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದೆ, ನಾಗರಿಕರು ವಾಸಿಸುವ ಪ್ರದೇಶಗಳ ಮೇಲೆ ಅಪರಿಮಿತ ಸ್ಫೋಟಕಗಳನ್ನೊಳಗೊಂಡ ಬಾಂಬ್‌ಗಳನ್ನು ಹಾಕಿದೆ ಹಾಗೂ ಲಕ್ಷಾಂತರ ಜನರನ್ನು ಅಮಾನವೀಯ ಪರಿಸ್ಥಿತಿಯಲ್ಲಿ ಬಂಧನದಲ್ಲಿಟ್ಟಿದೆ’’ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ 32ನೆ ಅಧಿವೇಶನವನ್ನು ಉದ್ಘಾಟಿಸಿದ ಅವರು ಹೇಳಿದರು. ‘‘ಈ ಪರಿಸ್ಥಿತಿಯನ್ನು ನಾನು ಎಷ್ಟು ತೀವ್ರವಾಗಿ ಖಂಡಿಸುತ್ತೇನೆ ಎನ್ನುವುದನ್ನು ಪದಗಳು ಹೇಳಲಾರವು’’ ಎಂದರು.
ಮಾನವಹಕ್ಕುಗಳ ವಿಷಯದಲ್ಲಿ ವಿಶ್ವಸಂಸ್ಥೆಯೊಂದಿಗೆ ಸಹಕರಿಸಲು ದೇಶಗಳು ನಿರಾಕರಿಸುತ್ತಿರುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
‘‘ದೇಶಗಳು ನನ್ನ ಕಚೇರಿಯನ್ನು ಮುಚ್ಚಬಹುದು, ಆದರೆ ಅವುಗಳಿಗೆ ನಮ್ಮ ಬಾಯಿಯನ್ನು ಮುಚ್ಚಿಸಲು ಸಾಧ್ಯವಿಲ್ಲ ಹಾಗೂ ನಮ್ಮನ್ನು ಕುರುಡರನ್ನಾಗಿ ಮಾಡಲೂ ಸಾಧ್ಯವಿಲ್ಲ’’ ಎಂದರು.





