ಹಾಲಿ ಮತ್ತು ನಿವೃತ್ತ ಸರಕಾರಿ ನೌಕರರಿಗೆ ತನಿಖೆಗಳ ವಿರುದ್ಧ ರಕ್ಷಣೆ ಸಾಧ್ಯತೆ
ಹೊಸದಿಲ್ಲಿ,ಸೆ.13: ಸಿಬಿಐನಂತಹ ತನಿಖಾ ಸಂಸ್ಥೆಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಾಲಿ ಮತ್ತು ನಿವೃತ್ತ ನೌಕರರನ್ನು ಯಾವುದೇ ತನಿಖೆಗೊಳಪಡಿಸುವ ಮುನ್ನ ಸಂಬಂಧಿಸಿದ ಸರಕಾರಗಳ ಪೂರ್ವಾನುಮತಿ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸುವ ಮೂಲಕ ಸರಕಾರವು ಈ ನೌಕರರಿಗೆ ರಕ್ಷಣೆಯನ್ನು ಒದಗಿಸುವ ಸಾಧ್ಯತೆಯಿದೆ. ತಾವು ಕೈಗೊಂಡ ಪ್ರಾಮಾಣಿಕ ನಿರ್ಧಾರಗಳ ಬಗ್ಗೆ ತನಿಖಾ ಸಂಸ್ಥೆಗಳಿಂದ ತಮಗೆ ರಕ್ಷಣೆಯನ್ನು ಒದಗಿಸುವಂತೆ ಐಎಎಸ್ ಅಧಿಕಾರಿಗಳು ಮತ್ತು ಇತರ ಸರಕಾರಿ ನೌಕರರ ಆಗ್ರಹಗಳ ಹಿನ್ನೆಲೆಯಲ್ಲಿ ಸರಕಾರದ ಈ ಉದ್ದೇಶಿತ ಕ್ರಮವು ಮಹತ್ವ ಪಡೆದುಕೊಂಡಿದೆ. ಮಾಜಿ ದೂರಸಂಪರ್ಕ ಕಾರ್ಯದರ್ಶಿ ಶ್ಯಾಮಲಾಲ್ ಘೋಷ್ ಮತ್ತು ಮಾಜಿ ಕಲ್ಲಿದ್ದಲು ಕಾರ್ಯದರ್ಶಿಗಳಾದ ಪಿ.ಸಿ.ಪಾರೇಖ್ ಹಾಗೂ ಎಚ್.ಸಿ.ಗುಪ್ತಾ ಅವರು ಅನುಕ್ರಮವಾಗಿ 2ಜಿ ಸ್ಪ್ರೆಕ್ಟ್ರಂ ಮತ್ತು ಕಲ್ಲಿದ್ದಲು ಗಣಿ ಹಂಚಿಕೆ ಹಗರಣಗಳಲ್ಲಿ ಭಾಗಿಯಾದ ಆರೋಪಗಳನ್ನು ಹೊತ್ತು ಎದುರಿಸುತ್ತಿರುವ ಪ್ರಕರಣಗಳನ್ನು ಈ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಈ ಮೂವರೂ ಗೌರವಯುತ ಅಧಿಕಾರಿಗಳಾಗಿದ್ದರೂ ತನಿಖೆಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಬೆಟ್ಟು ಮಾಡಿದ್ದಾರೆ. ಐಎಎಸ್ ಅಧಿಕಾರಿಗಳ ನಿಯೋಗವೊಂದು ಇತ್ತೀಚಿಗೆ ಸಹಾಯಕ ಸಿಬ್ಬಂದಿ ಸಚಿವ ಜಿತೇಂದ್ರ ಸಿಂಗ್‌ಅವರನ್ನು ಭೇಟಿಯಾಗಿ ಪ್ರಾಮಾಣಿಕ ಸರಕಾರಿ ನೌಕರರು ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಿಂಜರಿಯದಂತೆ ಅವರಿಗೆ ರಕ್ಷಣೆಯನ್ನು ಒದಗಿಸಬೇಕು ಎಂದು ಆಗ್ರಹಿಸಿತ್ತು.





