ಟ್ರಂಪ್ ಅಧ್ಯಕ್ಷರಾದರೆ ಅಮೆರಿಕಕ್ಕೆ ಆಗುವ ಆರ್ಥಿಕ ನಷ್ಟದ ಅಂದಾಜು ಪ್ರಕಟಿಸಿದ ಆಕ್ಸ್ ಫರ್ಡ್ ಇಕಾನಾಮಿಕ್ಸ್

ನ್ಯೂಯಾರ್ಕ್ , : ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ನವೆಂಬರ್ ತಿಂಗಳಿನಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಸಾಧಿಸಿದ್ದೇ ಆದಲ್ಲಿ2021 ರ ಹೊತ್ತಿಗೆ ಅಮೆರಿಕದ ಆರ್ಥಿಕತೆ ಸಾಧಿಸುತ್ತಿದ್ದ ಪ್ರಗತಿಯಲ್ಲಿ ಸುಮಾರು ಒಂದು ಟ್ರಿಲಿಯನ್ ಡಾಲರ್ ಅಂದರೆ 10,000 ಕೋಟಿ ಡಾಲರ್ ನಷ್ಟು ಕುಂಠಿತವಾಗಲಿದೆಯೆಂದು ಆಕ್ಸ್ ಫರ್ಡ್ ಇಕಾನಾಮಿಕ್ಸ್ ಸಂಸ್ಥೆ ಹೇಳಿದೆ.
ಟ್ರಂಪ್ ಅವರ ಪ್ರಮುಖ ನೀತಿಗಳಾದ ಸಂರಕ್ಷಿತ ವಹಿವಾಟು ಕ್ರಮಗಳು, ತೆರಿಗೆ ವಿನಾಯತಿ ಹಾಗೂ ಅಕ್ರಮ ವಲಸಿಗರನ್ನು ದೇಶದಿಂದ ಸಾಮೂಹಿಕವಾಗಿ ಹೊರ ಕಳುಹಿಸುವಂತಹ ಕ್ರಮಗಳು ಕಾಂಗ್ರೆಸ್ ಜತೆ ಮಾತುಕತೆ ವೇಳೆ ಬಲಹೀನಗೊಂಡು ವ್ಯತಿರಿಕ್ತ ಪರಿಣಾಮಗಳುಂಟಾಗುವ ಸಂಭವವಿದೆಯೆಂದು ಅದು ತಿಳಿಸಿದೆ.
‘‘ಆದರೆ ಟ್ರಂಪ್ ತಾವು ಜಾರಿಗೆ ತರಲುದ್ದೇಶಿಸಿದ ನೀತಿಗಳನ್ನು ಜಾರಿಗೊಳಿಸಲು ಸಫಲರಾಗಿದ್ದೇ ಆದಲ್ಲಿ ಅದರ ಪರಿಣಾಮ ದೂರಗಾಮಿಯಾಗಲಿದ್ದುಅಮೆರಿಕದ ಜಿಡಿಪಿಯನ್ನು ಶೇ.5ರಷ್ಟು ಕಡಿತಗೊಳಿಸುವ ಸಂಭವವಿದೆ ಹಾಗೂ ದೇಶದ ಪ್ರಗತಿಯ ಮೇಲೂ ಅದು ಪರಿಣಾಮ ಬೀರಲಿದೆ.
ಈ ನಿಟ್ಟಿನಲ್ಲಿ ಆಕ್ಸ್ ಫರ್ಡ್ ಇಕಾನಾಮಿಕ್ಸ್ ನಡೆಸಿರುವ ಅಧ್ಯಯನದ ಬಗ್ಗೆ ಪ್ರತಿಕ್ರಿಯಿಸಲು ಟ್ರಂಪ್ ಅವರ ಪ್ರತಿನಿಧಿಗಳು ಲಭ್ಯರಿರಲಿಲ್ಲವಾದರೂ ಮಂಗಳವಾರ ಲೋವಾದ ಕ್ಲೈವ್ ನಗರದಲ್ಲಿ ತಮ್ಮ ಪ್ರಚಾರ ಕಾರ್ಯಕ್ರಮದಲ್ಲಿ ತಾವು ಅಮೆರಿಕದ ಆರ್ಥಿಕ ಪ್ರಗತಿಗೆ ಬದ್ಧರಾಗಿರುವುದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ. ದೇಶದ ಉತ್ಪಾದನಾ ರಂಗವನ್ನು ಪುನರುಜ್ಜೀವಗೊಳಿಸಿ ಆ್ಯಪಲ್ನಂತಹ ಕಂಪೆನಿಗಳು ತನ್ನ ಉತ್ಪನ್ನಗಳನ್ನು ವಿದೇಶಗಳಲ್ಲಿ ತಯಾರಿಸುವುನ್ನು ನಿಲ್ಲಿಸುವುದಾಗಿ ಅವರು ಹೇಳಿದರು.
‘‘ನಾವು ಎಲ್ಲಾ ಅಮೆರಿಕನ್ನರಿಗೂ ಅವಕಾಶಗಳು, ಸಮೃದ್ಧಿ ಹಾಗೂ ಸುರಕ್ಷೆ ಒದಗಿಸುತ್ತೇವೆ,’’ ಎಂದು ಟ್ರಂಪ್ ಹೇಳಿದರು.
ಆಕ್ಸ್ ಫರ್ಡ್ ಇಕಾನಾಮಿಕ್ಸ್ ಅಧ್ಯಯನದ ಪ್ರಕಾರ ಅಮೆರಿಕದ ಜಿಡಿಪಿ2017 ರಲ್ಲಿ ಶೇ 3 ರಿಂದಹೆಚ್ಚುಗೊಂಡು 2021 ರ ಒಳಗೆ18.5 ಟ್ರಿಲಿಯನ್ ಡಾಲರ್ ಆಗಲಿದೆ. ಆದರೆ ಟ್ರಂಪ್ ಚುನಾಯಿತರಾಗಿ ತಮ್ಮ ನೀತಿಗಳನ್ನು ಜಾರಿಗೊಳಿಸಿದರೆ ದೇಶದ ಒಟ್ಟಾರೆ ಜಿಡಿಪಿ 17.5 ಟ್ರಿಲಿಯನ್ ಡಾಲರ್ ಗೆ ಇಳಿಯಬಹುದು ಎಂದು ಅದು ಹೇಳಿದೆ.
ತಮ್ಮ ಎಲ್ಲಾ ನೀತಿಗಳನ್ನು ಜಾರಿಗೊಳಿಸಲು ಟ್ರಂಪ್ ಅವರು ಕಾಂಗ್ರೆಸ್ ಬೆಂಬಲ ಪಡೆಯಲು ಹೆಣಗಾಡಬೇಕಾಗುತ್ತದೆ ಎಂದೂ ಸಂಸ್ಥೆ ಅಭಿಪ್ರಾಯ ಪಟ್ಟಿದೆ.





