ಮಡೆಸ್ನಾನ ಅಮಾನವೀಯ, ಇದನ್ನು ನಿಷೇಧಿಸಿ: ಕೇಂದ್ರ ಸರಕಾರದಿಂದ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ

ಹೊಸದಿಲ್ಲಿ, ಸೆ.14: ಮಡೆಸ್ನಾನ ಅಮಾನವೀಯ ಮತ್ತು ವೌಢ್ಯದಿಂದ ಕೂಡಿದ ಆಚರಣೆಯಾಗಿದ್ದು, ಇದನ್ನು ನಿಷೇಧಿಸುವಂತೆ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಪ್ರತಿ ವರ್ಷ ನಡೆಯುವ ಈ ಆಚರಣೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು ಕೂಡಾ.
‘ ಎಂಜಲೆಲೆಯ ಮೇಲೆ ಉರುಳಾಡುವ ಮಡೆಸ್ನಾನವನ್ನು ಅಮಾನವೀಯ ಮತ್ತು ಮೌಢ್ಯದಿಂದ ಕೂಡಿದ ಆಚರಣೆ’ ಎಂದು ಕೇಂದ್ರ ಸರಕಾರ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದೆ. ಎಂಜಲೆಲೆಯ ಮೇಲೆ ಉರುಳಲು ಯಾರಿಗೂ ಬಲವಂತ ಮಾಡುವುದಿಲ್ಲ, ಇದು ಅವರವರ ನಂಬಿಕೆಗೆ ಬಿಟ್ಟ ವಿಚಾರ’’ ಎಂದು ಈ ವೌಢ್ಯವನ್ನು ಸಮರ್ಥಿಸುತ್ತಿರುವವರ ವಾದವನ್ನು ತಳ್ಳಿಹಾಕಿರುವ ಕೇಂದ್ರ ಸರಕಾರ, ‘ಧಾರ್ಮಿಕ ಸ್ವಾತಂತ್ರದ ಕಲಂ ಸಂವಿಧಾನದ 25ನೇ ಪರಿಚ್ಛೇದದ ಹೆಸರಿನಲ್ಲಿ ಇಂಥ ಪದ್ಧತಿ ಗಳನ್ನು ಸಮರ್ಥಿಸಿಕೊಳ್ಳಲಾಗದು. ಇದು ಅವರವರ ನಂಬಿಕೆಗೆ ಸಂಬಂಧಿಸಿರ ಬಹುದು. ಆದರೆ ಅಂತಿಮವಾಗಿ ಮಾನವನ ಗೌರವ ಮುಖ್ಯ. ಈ ಪದ್ಧತಿ ಸಂವಿಧಾನದ ಮೌಲ್ಯ, ಸಮಾನತೆ, ಮಾನವ ಗೌರವಕ್ಕೆ ವಿರುದ್ಧ’ ಎಂದು ತಿಳಿಸಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ನಡೆಯುವ ಮಡೆಸ್ನಾನದಂತಹ ಆಚರಣೆ ತಮಿಳುನಾಡಿನ ಕರೂರು ಜಿಲ್ಲೆಯ ನೆರೂರು ಸದಾಶಿವ ಬ್ರಹ್ಮೇಂದ್ರೈ ದೇವಾಲಯದಲ್ಲೂ ನಡೆಯುತ್ತಿದೆ.





