ಕಾವೇರಿ ಸಮಸ್ಯೆಯನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳಲು ಪ್ರಧಾನಿ ಸಲಹೆ: ಸಚಿವ ದೇಶಪಾಂಡೆ

ಬೆಂಗಳೂರು, ಸೆ.14: ಕಾವೇರಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯಲಾಗಿದೆ. ಆದರೆ ಅವರು ಈ ಸಮಸ್ಯಯನ್ನು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಭೇಟಿಗೆ ಸಮಯ ಕೇಳಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯ ತಿಳಿಸಿದರು.
ಕಾವೇರಿ ವಿಚಾರದಲ್ಲಿ ಸಾರ್ವಜನಿಕರು ಶಾಂತಿಯಿಂದ ವರ್ತಿಸಬೇಕು. ಕಳೆದೆಡರು ದಿನಗಳಲ್ಲಿ ಕಾನೂನು ಸುವ್ಯವಸ್ಥೆ ಮೇಲೆ ಆಗಿರುವ ದುಷ್ಪರಿಣಾಮ ಬೇಸರದ ವಿಷಯ. ಸಾರ್ವಜನಿಕ ವಾಹನಗಳನ್ನು ಸುಟ್ಟುಹಾಕುವುದರಿಂದ ಸಮಸ್ಯೆ ಏನೂ ಪರಿಹಾರವಾಗದು. ಜನತೆ ಶಾಂತಿ ಕಾಪಾಡಬೇಕು ಎಂದವರು ಮನವಿ ಮಾಡಿದರು.
ನೆಲ ಜಲದ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಎಲ್ಲರೂ ಒಗ್ಗೂಡಬೇಕಿದೆ ಎಂದರು.
*ಎಂಎನ್‌ಸಿಯಿಂದ ಮುಖ್ಯಮಂತ್ರಿ ಪರಿಹಾರನಿಧಿಗೆ 1 ಕೋ.ರೂ.
ಎಂಎನ್‌ಸಿ ಕಂಪೆನಿಯಿಂದ ಈ ಬಾರಿ 12 ಕೋ.ರೂ. ಲಾಭವಾಗಿದೆ. ಈ ಹಿನ್ನೆಲೆಯಲ್ಲಿ ಬಡಬಗ್ಗರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋ.ರೂ. ನೀಡಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.







