ಸೆ.16ರಂದು ಕೆಸ್ಸಾರ್ಟಿಸಿ ಮಜ್ದೂರ್ ಸಂಘದ ಮಹಾಸಭೆ, ಕಾರ್ಮಿಕರ ಸ್ನೇಹಕೂಟ

ಪುತ್ತೂರು, ಸೆ.14: ಕೆಸ್ಸಾರ್ಟಿಸಿ ಮಜ್ದೂರ್ ಸಂಘ ಪುತ್ತೂರು ವಿಭಾಗದ ಮಹಾಸಭೆ ಹಾಗೂ ಕಾರ್ಮಿಕರ ಸ್ನೇಹಕೂಟ ಕಾರ್ಯಕ್ರಮ ಸೆ.16ರಂದು ಪುತ್ತೂರಿನ ಕಲ್ಲಾರೆ ಶ್ರೀಗುರು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಗಿರೀಶ್ ಮಳಿ ತಿಳಿಸಿದ್ದಾರೆ.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬೆಳಗ್ಗೆ 10 ಗಂಟೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸದಸ್ಯ ಪಿ. ಕೇಶವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಘದ ಗೌರವ ಅಧ್ಯಕ್ಷೆ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಬಿಎಂಎಸ್ ಆಟೋರಿಕ್ಷಾ ಚಾಲಕ ಮಾಲಕ ಸಂಘದ ಗೌರವ ಅಧ್ಯಕ್ಷ ಡಾ. ಎಂ.ಕೆ.ಪ್ರಸಾದ್, ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡಮಿ ಅಧ್ಯಕ್ಷ ಹುಸೈನ್ ದಾರಿಮಿ, ಸಂತ ಫಿಲೋಮಿನಾ ಕಾಲೇಜ್ ಮುಖ್ಯಸ್ಥ ರೆ.ಫಾ.ಅಂಥೋನಿ ಪ್ರಕಾಶ್ ಮೊಂತೆರೊ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ್ ಪ್ರಾಂಶುಪಾಲ ಗೋಪಿನಾಥ ಶೆಟ್ಟಿ, ಮಜ್ದೂರ್ ಸಂಘಗಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ದಯಾನಂದ ಸಾಗರ್ ಭಾಗವಹಿಸಲಿದ್ದಾರೆ. ಇದೇವೇಳೆ ಸಾಮಾಜಿಕ ಕ್ಷೇತ್ರದಲ್ಲಿನ ಸಾಧಕರಾದ ವಲೇರಿಯನ್ ಡಯಾಸ್, ಆದಂ ಹೆಂತಾರ್ ಮತ್ತು ಭಾಸ್ಕರ ಬೊಳುವಾರು ಅವರನ್ನು ಗೌರವಿಸಲಾಗುವುದು. ಅಪರಾಹ್ನ 2 ಗಂಟೆಗೆ ದ.ಕ. ಜಿಲ್ಲಾ ಸಂಸ್ಕಾರ ಭಾರತಿ ಸಂಚಾಲಕ ಕಶೆಕೋಡಿ ಸೂರ್ಯನಾರಾಯಣ ಭಟ್ ದಿಕ್ಸೂಚಿ ಬಾಷಣ ಮಾಡಲಿದ್ದಾರೆ. ಅಪರಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ, ಅತಿಥಿಗಳಾಗಿ ಪುತ್ತೂರು ಉಪವಿಭಾಗಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಸಹಾಯಕ ಪೊಲೀಸ್ ಆಯುಕ್ತ ಸಿ.ಬಿ.ರಿಶ್ಯಂತ್, ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ ಶಿರಾಲಿ ಮತ್ತು ಮಜ್ದೂರ್ ಸಂಘಗಳ ಒಕ್ಕೂಟದ ಅಧ್ಯಕ್ಷ ರಾಮಕೃಷ್ಣ ಪೂಂಜಾ ಬಾಗವಹಿಸಲಿದ್ದಾರೆ. ಈ ಸಂದರ್ಭ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಸಂಘದ ಕಾರ್ಯಕರ್ತರನ್ನು ಸನ್ಮಾನಿಸಲಾಗುವುದು. ಸಂಜೆ 5 ಗಂಟೆಯ ಬಳಿಕ ತಾಲೂಕು ಕಾನೂನು ಸೇವೆಗಳ ಸಮಿತಿ ಸಹಯೋಗದಲ್ಲಿ ಕಾರ್ಮಿಕರಿಗೆ ಕಾನೂನು ಮಾಹಿತಿ ಕಾರ್ಯಾಗಾರ ನಡೆಯಲಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಂಜೀವ ಗೌಡ, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಶಾಂತಾರಾಮ ವಿಟ್ಲ, ಪುತ್ತೂರು ಘಟಕದ ಅಧ್ಯಕ್ಷ ಮಾಡಾವು ವಿಶ್ವನಾಥ ರೈ ಮತ್ತು ಸದಸ್ಯರಾದ ಟಿ.ರಾಮಕೃಷ್ಣ, ಸಾಂತಪ್ಪಪೂಜಾರಿ, ಮಹಾಬಲ ಜಿ ಮತ್ತು ವಿ.ಎಸ್.ಲಕ್ಷ್ಮಣ ಉಪಸ್ಥಿತರಿದ್ದರು.





