ಎಪ್ರಿಲ್‌ನಲ್ಲಿ ‘ನಮ್ಮ ಮೆಟ್ರೊ’ ಮೊದಲ ಹಂತ ಪೂರ್ಣ: ಸಿದ್ದರಾಮಯ್ಯ

ಮಂಗಳೂರು, ಸೆ.14: ‘ನಮ್ಮ ಮೆಟ್ರೊ’ ಮೊದಲ ಹಂತದ ಕಾಮಗಾರಿ ಜನವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಎಪ್ರಿಲ್ ಇದು ಸಂಪೂರ್ಣವಾಗಿ ಕಾರ್ಯಾರಂಭಗೊಳ್ಳಲಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಮ್ಮ ಮೆಟ್ರೊ ಕುರಿತು ಇಂದು ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಮೊದಲ ಹಂತದಲ್ಲಿ 15 ಕಿ.ಮೀ. ಸುರಂಗ ಮಾರ್ಗ ಕಾಮಗಾರಿ ಮಾತ್ರ ಬಾಕಿಯಿದೆ. ಜನವರಿ ಅಂತ್ಯಕ್ಕೆ ಇದು ಪೂರ್ಣಗೊಳ್ಳಲಿದೆ. ಇದರಿಂದ ಪ್ರತಿನಿತ್ಯ ಐದು ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ನಮ್ಮ ಮೆಟ್ರೊ ಮೊದಲ ಹಂತವು 13,800 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಪ್ರಸ್ತುತ ನಮ್ಮ ಮೆಟ್ರೊ 33 ಕಿ.ಮೀ. ಕಾರ್ಯನಿರ್ವಹಿಸುತ್ತಿದ್ದು, ಪ್ರತಿನಿತ್ಯ 1.40 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ ಎಂದವರು ವಿವರಿಸಿದರು.
ಈ ನಡುವೆ ಎರಡನೆ ಹಂತದ ಕಾಮಗಾರಿ ಕೂಡಾ ಪ್ರಾರಂಭವಾಗಿದೆ. ಕಾಲಮಿತಿಯೊಳಗೆ ಇದನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ-ವೈಟ್‌ಫೀಲ್ಡ್ ನಡುವಿನ 16 ಕಿ.ಮೀ. ಟೆಂಡರ್ ಈ ತಿಂಗಳ ಅಂತ್ಯದಲ್ಲಿ ಕರೆಯಲಾಗುವುದು. ಎರಡನೆ ಹಂತಕ್ಕೆ 24,600 ಕೋಟಿ ವೆಚ್ಚ ತಗಲಲಿದೆ. ಇದರಲ್ಲಿ ಶೇ.20ರಷ್ಟು ಕೇಂದ್ರ ಸರ್ಕಾರ, ಶೇ.20ರಷ್ಡು ರಾಜ್ಯ ಸರ್ಕಾರ ಭರಿಸುತ್ತಿದೆ. ಉಳಿದ ಮೊತ್ತವನ್ನು ಫ್ರಾನ್ಸ್ ಕಂಪನಿಯಿಂದ ಸಾಲ ಪಡೆಯಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದರು.





