ವಾಟ್ಸ್‌ಆ್ಯಪ್ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

ನವದೆಹಲಿ,ಸೆ.14 : ವಾಟ್ಸ್‌ಆ್ಯಪ್ ತನ್ನ ಬಳಕೆದಾರರಿಗೆ ಸಂಬಂಧಿಸಿದ ಡಾಟಾವನ್ನು ತನ್ನ ಮಾತೃ ಕಂಪೆನಿ ಫೇಸ್ ಬುಕ್ ನೊಂದಿಗೆ ಶೇರ್ ಮಾಡುವ ನಿರ್ಧಾರವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟಿನಲ್ಲಿ ಸಲ್ಲಿಸಲಾದ ಅಪೀಲೊಂದರ ವಿಚಾರಣೆಯನ್ನು ಕೈಗೆತ್ತಿಕೊಂಡನ್ಯಾಯಾಲಯವು ಈ ವಿಚಾರದಲ್ಲಿ ವಾಟ್ಸ್‌ಆ್ಯಪ್ ಪ್ರತಿಕ್ರಿಯೆಯನ್ನು ಕೇಳಿದೆ. ವಾಟ್ಸ್‌ಆ್ಯಪ್ ನ ಹೊಸ ಪ್ರೈವೆಸಿ ಪಾಲಿಸಿ ಈಗಾಗಲೇ ಅದರ ಬಳಕೆದಾರರಲ್ಲಿ ಸಾಕಷ್ಟು ಕಳವಳ ಉಂಟು ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ವಾಟ್ಸ್‌ಆ್ಯಪ್ ಪ್ರೈವೆಸಿ ಪಾಲಿಸಿ ಅದರ ಬಳಕೆದಾರರ ಹಕ್ಕುಗಳೊಂದಿಗೆ ರಾಜಿ ಮಾಡಿಕೊಳ್ಳುತ್ತಿದೆಯೆಂದು ದೂರಿ ದೆಹಲಿಯ ಕರ್ಮನ್ಯ ಸಿಂಗ್ ಸರೀನ್ ಹಾಗೂ ಶ್ರೇಯಾ ಸೇಠಿ ಎಂಬಿಬ್ಬರು ವಾಟ್ಸ್‌ಆ್ಯಪ್ ಬಳಕೆದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಬುಧವಾರ ಈ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡಾಗ ವಾಟ್ಸ್‌ಆ್ಯಪ್ ಪರ ವಕೀಲರಾದ ಸಿದ್ಧಾರ್ಥ್ ಲುಥ್ರಾ, ವಾಟ್ಸ್‌ಆ್ಯಪ್ ತನ್ನ ಬಳಕೆದಾರರ ಖಾಸಗಿ ಸಂದೇಶಗಳನ್ನು, ಫೊಟೋ ಯಾ ಡಾಟಾವನ್ನು ಫೇಸ್ ಬುಕ್ ಜತೆಹಂಚುವುದಿಲ್ಲವೆಂದು ಹೇಳಿದರು. ವಾಟ್ಸ್‌ಆ್ಯಪ್ ಕೇವಲ ಬಳಕೆದಾರರ ಹೆಸರ ಹಾಗೂ ಫೋನ್ ಸಂಖ್ಯೆಯನ್ನುಫೇಸ್ ಬುಕ್ ಜತೆ ಶೇರ್ ಮಾಡುತ್ತಿರುವುದಾಗಿ ಹೇಳಿತ್ತು.
ಆದರೆ ಅರ್ಜಿದಾರರ ವಕೀಲರಾದ ಪ್ರತಿಭಾ ಎಂ ಸಿಂಗ್ ತಮ್ಮ ಕಕ್ಷಿಗಾರರ ಪರವಾಗಿ ವಾದಿಸುತ್ತಾ ವಾಟ್ಸ್‌ಆ್ಯಪ್ ತನ್ನ ಬಳಕೆದಾರರ ಎಲ್ಲಾ ಮಾಹಿತಿಗಳನ್ನುಫೇಸ್ ಬುಕ್ ನೊಂದಿಗೆ ಶೇರ್ ಮಾಡುತ್ತಿದೆಯೆಂದು ಹೇಳಿದರು.ವಾಟ್ಸ್‌ಆ್ಯಪ್ ಗೆ ಭಾರತದಲ್ಲಿ ಸುಮಾರು 7 ಕೋಟಿ ಬಳಕೆದಾರರಿದ್ದು ಇದು ವಿಶ್ವದ ವಾಟ್ಸ್ ಅಪ್ ಬಳಕೆದಾರರ ಹತ್ತನೇ ಒಂದಂಶದಷ್ಟಿದೆ.
ಹೈಕೋರ್ಟಿನ ನೋಟಿಸ್ ಒಂದಕ್ಕೆ ಪ್ರತಿಕ್ರಿಯಿಸಿದ ಟ್ರಾಯ್ ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಿದೆ.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 21 ಕ್ಕೆ ನಿಗದಿ ಪಡಿಸಲಾಗಿದೆ.







