ಮುಸ್ಲಿಂ ಮಹಿಳೆಗೆ ನಡು ಬೀದಿಯಲ್ಲಿ ಬೆಂಕಿ ಹಚ್ಚಲು ಯತ್ನ

ನ್ಯೂಯಾರ್ಕ್,ಸೆ.14 : ಇಲ್ಲಿನ ಪಾರ್ಕ್ ಅವೆನ್ಯೂ ಪ್ರದೇಶದ ವಿಲಾಸಿ ಬಟ್ಟೆಗಳ ಮಳಿಗೆಯೆದುರುನಿಂತಿದ್ದ ಸಾಂಪ್ರದಾಯಿಕ ಉಡುಗೆ ಧರಿಸಿದ್ದ ಮುಸ್ಲಿಂ ಮಹಿಳೆಯ ಬಟ್ಟೆಗೆ ಬೆಂಕಿ ಹಚ್ಚಲು ಯತ್ನಿಸಿದ ವ್ಯಕ್ತಿಗಾಗಿ ನ್ಯೂಯಾರ್ಕ್ ಪೊಲೀಸರು ಹುಡುಕುತ್ತಿದ್ದಾರೆ. ಸೆಪ್ಟಂಬರ್ 11 ರ ದಾಳಿಯ ವಾರ್ಷಿಕ ದಿನಾಚರಣೆಯ ಮುನ್ನಾ ದಿನ ಈ ಘಟನೆ ನಡೆದಿದೆ.
ಮಹಿಳೆ ಅಂಗಡಿಯೆದುರು ನಿಂತಿದ್ದಾಗ ಒಮ್ಮೆಗೇ ಬೆನ್ನಿನ ಭಾಗ ಬಿಸಿಯಾದಂತಾಗಿ ತಿರುಗಿ ನೋಡಿದಾಗ ಆಕೆಯ ರವಿಕೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಬಿಡುಗಡೆಗೊಳಿಸಿದ್ದು ಆರೋಪಿಗಾಗಿ ಬಲೆ ಬೀಸಲಾಗಿದೆ. ಘಟನೆ ನಡೆದಾಗ ಮಹಿಳೆ ಹಿಜಾಬ್ ಧರಿಸಿದ್ದಳು, ಮುಸ್ಲಿಂ ವಿರೋಧಿ ಭಾವನೆಯಿಂದ ಯಾರಾದರೂ ಇಂತಹ ಕೃತ್ಯಕ್ಕೆ ಕೈಹಾಕಿರಬಹುದೇ ಎಂದು ಕಂಡುಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಮುಸ್ಲಿಂ ಇಮಾಮ್ ಹಾಗೂ ಆತನ ಸಹಾಯಕನನ್ನು ಕೊಲೆಗೈದ ಆರೋಪದ ಮೇಲೆ ನ್ಯೂಯಾರ್ಕ್ ನಗರದ ಬ್ರೂಕ್ಲಿನ್ ನಿವಾಸಿ ಆಸ್ಕರ್ ಮೋರೆಲ್ ನನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆ ನ್ಯೂಯಾರ್ಕಿನ ಕ್ವೀನ್ಸ್ ಬರೋ ಪ್ರದೇಶದಲ್ಲಿ ಹಾಡು ಹಗಲೇ ನಡೆದಿತ್ತು. ಬಾಂಗ್ಲಾದೇಶದಿಂದ ಅಮೆರಿಕಗೆ ವಲಸೆ ಬಂದಿದ್ದ ಮೌಲಾನ ಅಕೊಂಜಿ (55) ಹಾಗೂ ಅವರ ಗೆಳೆಯ 64 ವರ್ಷದ ತಾರಾ ಉದ್ದೀನ್ ಅಂದು ಹತ್ಯೆಗೀಡಾಗಿದ್ದರು. ಅವರಿಬ್ಬರ ಮೇಲೆ ಅವರ ಧರ್ಮದ ಆಧಾರದಲ್ಲಿ ದಾಳಿ ನಡೆಸಲಾಗಿತ್ತೆಂದು ಹೇಳುವುದಕ್ಕೆ ಯಾವುದೇ ಪುರಾವೆಯಿಲ್ಲವೆಂದು ನ್ಯೂಯಾರ್ಕ್ ಪೊಲೀಸರು ಹೇಳಿದ್ದಾರೆ.
ಇತ್ತೀಚಿಗಿನ ಘಟನೆಯಂತೂ ಅಮೆರಿಕದಲ್ಲಿ ವಾಸಿಸುತ್ತಿರುವ ಮುಸ್ಲಿಮರಲ್ಲಿ ಅಸುರಕ್ಷಿತತೆಯ ಭಾವನೆ ಮೂಡಿಸಿದೆಯೆಂಬುದರಲ್ಲಿ ಎರಡು ಮಾತಿಲ್ಲ.







