ಶಾಂತಿಯತ್ತ ಬೆಂಗಳೂರು: ಪರಮೇಶ್ವರ್
ಕಾವೇರಿ ವಿವಾದ; ಸೂಕ್ಷ್ಮ ಪ್ರದೇಶಗಳಿಗೆ ಗೃಹ ಸಚಿವರ ಭೇಟಿ

ಬೆಂಗಳೂರು, ಸೆ.14: ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಮೂರು ದಿನಗಳಿಂದ ನಡೆದ ಹಿಂಸಾತ್ಮಕ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿರುವ ಅತೀ ಸೂಕ್ಷ್ಮ ಪ್ರದೇಶಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬುಧವಾರ ನಗರದ ಲಗ್ಗೆರೆ, ಹೆಗ್ಗನಹಳ್ಳಿ, ಟಿಂಬರ್‌ಯಾರ್ಡ್ ಲೇಔಟ್ ಹಾಗೂ ಆಶರ್‌ಆರ್ ನಗರದ ಕೆಪಿಎನ್ ಟ್ರಾವೆಲ್ಸ್ ಗೋಡಾನ್‌ಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಬೆಂಗಳೂರಲ್ಲಿ ವಾತಾವರಣ ಶಾಂತವಾಗಿದೆ. ಎಲ್ಲೂ ಅಹಿತಕರ ಘಟನೆ ನಡೆದಿಲ್ಲ. ಅಲ್ಲದೆ, ನಗರದ ಒಟ್ಟು 16 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಾಕಿರುವ ಕರ್ಫ್ಯೂ ನಿಷೇಧಾಜ್ಞೆ ಹಿಂದಕ್ಕೆ ಪಡೆಯುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ನುಡಿದರು.
ಗುರುವಾರ ತಮಿಳುನಾಡು ಬಂದ್‌ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಾಗೂ ಮುಖ್ಯವಾಗಿ ರಾಜಧಾನಿಯಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ಈಗಾಗಲೇ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದ ಅವರು, ಈಗಾಗಲೇ ಗಲಭೆಗೆ ಪ್ರೇರಣೆ ನೀಡಿದ ಹಾಗೂ ಸಾರ್ವಜನಿಕ ಆಸ್ತಿ ನಾಶ ಮಾಡಿದ ಆರೋಪದ ಮೇಲೆ 350ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಂತರ ಬಿಡುಗಡೆಗೊಳಿಸಲಾಗುವುದೆಂದು ಹೇಳಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಮುಂದುವರಿದಿದ್ದು, ಕೆಲವು ಕಡೆ ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ ಕೇಂದ್ರೀಯ ಮೀಸಲು ಪಡೆಯ ಪೊಲೀಸರು ರಾಜ್ಯ ಪೊಲೀಸರೊಂದಿಗೆ ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಗಿಳಿಯದಂತೆ ಎಚ್ಚರಿಸಲಾಗಿದೆ, ಅಕಸ್ಮಾತ್ ಹಿಂಸೆಗೆ ಕೈಹಾಕಿದರೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದೆಂದರು.
ಪರಿಶೀಲನೆ ವೇಳೆ ಶಾಸಕ ಎಸ್.ಟಿ.ಸೋಮಶೇಖರ್, ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ಮತ್ತಿತರರು ಉಪಸ್ಥಿತರಿದ್ದರು.





