ಸೆ.16: ಕೆಎಸ್ಸಾರ್ಟಿಸಿ ಮಜ್ದೂರ್ ಸಂಘದ ಮಹಾಸಭೆ, ಕಾರ್ಮಿಕರ ಸ್ನೇಹಕೂಟ
ಪುತ್ತೂರು, ಸೆ.14: ಕೆಎಸ್ಸಾರ್ಟಿಸಿ ಮಜ್ದೂರ್ ಸಂಘ ಪುತ್ತೂರು ವಿಭಾಗದ ಮಹಾಸಭೆ ಹಾಗೂ ಕಾರ್ಮಿಕರ ಸ್ನೇಹಕೂಟ ಕಾರ್ಯಕ್ರಮ ಸೆ.16ರಂದು ಕಲ್ಲಾರೆ ಶ್ರೀಗುರು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಗಿರೀಶ್ ಮಳಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು ಪೂರ್ವಾಹ್ನ 10ಕ್ಕೆ ದಸಂಸ ರಾಜ್ಯ ಸದಸ್ಯ ಪಿ. ಕೇಶವ ಕಾರ್ಯ ಕ್ರಮ ಉದ್ಘಾಟಿಸಲಿದ್ದಾರೆ. ಸಂಘದ ಗೌರವ ಅಧ್ಯಕ್ಷೆ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭ ಸಾಮಾಜಿಕ ಕ್ಷೇತ್ರದಲ್ಲಿ ಸಾಧಕರಾದ ವಲೇರಿಯನ್ ಡಯಾಸ್, ಆದಂ ಹೇಂತಾರ್ ಮತ್ತು ಭಾಸ್ಕರ ಬೊಳುವಾರು ಅವರನ್ನು ಗೌರವಿಸಲಾಗುವುದು. ಅಪರಾಹ್ನ 3ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಂದರ್ಭ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಸಂಘದ ಕಾರ್ಯಕರ್ತರನ್ನು ಸನ್ಮಾನಿಸಲಾಗುವುದು. ಸಂಜೆ 5ಕ್ಕೆ ತಾಲೂಕು ಕಾನೂನು ಸೇವೆಗಳ ಸಮಿತಿ ಸಹಯೋಗದಲ್ಲಿ ಕಾರ್ಮಿಕರಿಗೆ ಕಾನೂನು ಮಾಹಿತಿ ಕಾರ್ಯಾಗಾರ ನಡೆಯಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಂಜೀವ ಗೌಡ, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಶಾಂತಾರಾಮ ವಿಟ್ಲ, ಪುತ್ತೂರು ಘಟಕದ ಅಧ್ಯಕ್ಷ ಮಾಡಾವು ವಿಶ್ವನಾಥ ರೈ ಮತ್ತು ಸದಸ್ಯರಾದ ಟಿ. ರಾಮಕೃಷ್ಣ, ಸಾಂತಪ್ಪ ಪೂಜಾರಿ, ಮಹಾಬಲ ಜಿ. ಮತ್ತು ವಿ.ಎಸ್.ಲಕ್ಷ್ಮಣ ಉಪಸ್ಥಿತರಿದ್ದರು.





