ರೋಟರಿಯಿಂದ ನಾನಾ ಯೋಜನೆಗಳ ಅನುಷ್ಠಾನ
ಮಂಗಳೂರು, ಸೆ.14: ‘ಮನುಕುಲದ ಸೇವೆಯಲ್ಲಿ ರೋಟರಿ’ ಎನ್ನುವ ಧ್ಯೇಯದೊಂದಿಗೆ ರಾಜ್ಯ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ವಿಶೇಷವಾದ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ದ.ಕ., ಕೊಡಗು, ಮೈಸೂರು ಹಾಗೂ ಚಾಮರಾಜನಗರ ರೋಟರಿ ಗವರ್ನರ್ ಡಾ.ಆರ್.ಎಸ್. ನಾಗಾರ್ಜುನ ಹೇಳಿದರು.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ‘ಹಿಲ್‌ಸೈಡ್ ರೋಟರಿ’ ತನ್ನ 26ನೆ ವರ್ಷಾಚರಣೆಯ ಸಂದರ್ಭ ‘ನಮ್ಮ ಹಳ್ಳಿ’ ಎನ್ನುವ ಯೋಜನೆಯ ಮೂಲಕ ಜಿಲ್ಲೆಯ ಯಾವುದಾದರೂ ಒಂದು ಹಳ್ಳಿಯ ಸಮಗ್ರ ಅಭಿವೃದ್ಧಿ ಮಾಡುವ ಕೆಲಸ ಮಾಡಲಿದೆ. ‘ನಮ್ಮ ಭೂಮಿ’ ಎನ್ನುವ ಯೋಜನೆ ಮೂಲಕ ಒಂದು ಲಕ್ಷಕ್ಕೂ ಅಧಿಕ ಗಿಡ ನೆಡುವ ಜತೆಯಲ್ಲಿ ಅದರ ರಕ್ಷಣೆ ಹೊಣೆಗಾರಿಕೆಯನ್ನು ಹೊರುತ್ತದೆ. ಶಿಕ್ಷಣದಲ್ಲಿ ಹಿಂದೆ ಉಳಿದ ಮಕ್ಕಳಿಗೆ ವಿಶೇಷ ತರಬೇತಿ, ಪ್ರೋತ್ಸಾಹ ನೀಡುವ ಕೆಲಸ ಮಾಡಲಿದೆ. ನಗರದಲ್ಲಿ ಸಕ್ಕರೆ ಕಾಯಿಲೆಯ ಕುರಿತು ಜಾಗೃತಿ ಸೇರಿದಂತೆ ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.
ಈಗಾಗಲೇ ಮಂಗಳೂರಿನ ಹಿಲ್‌ಸೈಡ್ ರೋಟರಿ ಸಂಸ್ಥೆಯ ವೆಬ್‌ಸೈಟ್ ರಕ್ತದಾನ್.ಕಾಮ್ ಮೂಲಕ ರಕ್ತದಾನ ಮಾಡು ವವರ ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಯಾವಾಗ ಬೇಕಾದರೂ ರಕ್ತ ಕೊಡುವ ವ್ಯವಸ್ಥೆಯನ್ನು ಮಾಡಿದೆ. ಇದರ ಜತೆಯಲ್ಲಿ ಸರಕಾರಿ ಶಾಲೆಗಳಿಗೆ ನೆರವು, ಇ-ಲರ್ನಿಂಗ್ ಸ್ಕೂಲ್ ಕಿಟ್ ವಿತರಣೆ ಸೇರಿದಂತೆ ಸಮಾಜ ಹಾಗೂ ಜನರ ಅಭಿವೃದ್ಧಿ ವಿಚಾರ ದಲ್ಲಿ ಸಾಕಷ್ಟು ವಿನೂತನ ಯೋಜನೆಗಳನ್ನು ರೂಪಿಸಿದೆ ಎಂದರು.
ಈ ಸಂದರ್ಭ ಹಿಲ್‌ಸೈಡ್ ರೋಟರಿಯ ಅಧ್ಯಕ್ಷ ಉಮಾಕಾಂತ್ ನಾಯಕ್, ರೋಟರಿಯ ರಂಗನಾಥ ಕಿಣಿ, ವಿನಾಯಕ್ ಪ್ರಭು, ಸತೀಶ್ ಬಿ.ಕೆ. ಉಪಸ್ಥಿತರಿದ್ದರು.





