ಕಾಶ್ಮೀರದಲ್ಲಿ ಕರ್ಫ್ಯೂ-ನಿರ್ಬಂಧ ಮುಂದುವರಿಕೆ
ಶ್ರೀನಗರ, ಸೆ.14: ಕಾಶ್ಮೀರದಲ್ಲಿ ಕಾನೂನು -ಸುವ್ಯವಸ್ಥೆ ಪಾಲನೆಗಾಗಿ ಇಂದು ಕರ್ಫ್ಯೂ ಹಾಗೂ ನಿರ್ಬಂಧಗಳು ಮುಂದುವರಿದಿವೆ. ಕಣಿವೆಯಲ್ಲಿ ನಿನ್ನೆ ಇಬ್ಬರು ಯುವಕರು ಘರ್ಷಣೆಗಳಲ್ಲಿ ಬಲಿಯಾಗಿದ್ದು, ಹಿಂಸಾಚಾರದಲ್ಲಿ ಸತ್ತವರ ಸಂಖ್ಯೆ 78ಕ್ಕೇರಿದೆ.
ಬಾರಾಮುಲ್ಲಾ, ತಂಗ್‌ಮಾರ್ಗ್, ಪಟ್ಟಾನ್ ಹಾಗೂ ಹಂದ್ವಾರಗಳಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಕರ್ಫ್ಯೂ ಮುಂದುವರಿದಿದೆಯೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಶ್ವಸಂಸ್ಥೆಯ ಮಿಲಿಟರಿ ವೀಕ್ಷಕರ ಗುಂಪಿನ ಸ್ಥಳೀಯ ಕಚೇರಿಗೆ ಮೆರವಣಿಗೆ ನಡೆಸ ಬಯಸಿದ್ದ ಪ್ರತ್ಯೇಕತಾವಾದಿಗಳ ಯೋಜನೆಯನ್ನು ವಿಫಲಗೊಳಿಸಲು ನಿನ್ನೆ ಕಣಿವೆಯಾದ್ಯಂತ ಕರ್ಫ್ಯೂ ಜಾರಿಗೊಳಿಸಲಾಗಿತ್ತು.
ಕರ್ಫ್ಯೂ ಉಲ್ಲಂಘಿಸಲು ಪ್ರಯತ್ನಿಸಿದ ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವಿನ ಘರ್ಷಣೆಗಳಲ್ಲಿ ಇಬ್ಬರು ಹತರಾಗಿ ಹಲವರು ಗಾಯಗೊಂಡಿದ್ದರು.
ಇಂದು ದಿನದ ಕೆಲವು ತಾಸುಗಳು ಶಾಂತವಾಗಿಯೇ ಕಳೆದರೂ, ಬಳಿಕ ಶ್ರೀನಗರದ ಕೆಲವು ಭಾಗಗಳು ಸಹಿತ ಕಣಿವೆಯ ಸೂಕ್ಷ್ಮ ಪ್ರದೇಶಗಳಲ್ಲಿ ಕಲ್ಲು ತೂರಾಟ ನಡೆದ ಬಗ್ಗೆ ವರದಿಯಾಗಿದೆ.
ದಕ್ಷಿಣ ಕಾಶ್ಮೀರದ ಬನಿಹಾಲ್‌ನಿಂದ ಉತ್ತರ ಕಾಶ್ಮೀರದ ಉರಿಯವರೆಗೆ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳನ್ನು ಆಕ್ರಮಿಸುವಂತೆ ಪ್ರತ್ಯೇಕತಾವಾದಿಗಳಿಂದು ಕರೆ ನೀಡಿದ್ದಾರೆ.





