ಉಬರ್‌ನಿಂದ ಚಾಲಕರಹಿತ ಬಾಡಿಗೆ ಕಾರುಗಳ ಸೇವೆ ಆರಂಭ
ಸಾರಿಗೆ ಕ್ಷೇತ್ರದಲ್ಲೇ ಕ್ರಾಂತಿಕಾರಕ ಹೆಜ್ಜೆ
ಪಿಟ್ಸ್‌ಬರ್ಗ್ (ಪೆನ್ಸಿಲ್ವೇನಿಯ), ಸೆ. 14: ಬಾಡಿಗೆ ಕಾರುಗಳನ್ನು ಒದಗಿಸುವ ಉಬರ್ ಕಂಪೆನಿಯು ಅಮೆರಿಕದ ಪೆನ್ಸಿಲ್ವೇನಿಯ ರಾಜ್ಯದ ಪಿಟ್ಸ್‌ಬರ್ಗ್ ನಗರದಲ್ಲಿ ತನ್ನ ಮಹತ್ವಾಕಾಂಕ್ಷೆಯ ‘ಚಾಲಕರಹಿತ’ ಕಾರುಗಳ ಸೇವೆಯನ್ನು ಬುಧವಾರ ಆರಂಭಿಸಿದೆ.
ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಉಂಟು ಮಾಡುವ ಸಾಧ್ಯತೆಯನ್ನು ಹೊಂದಿರುವ ತಂತ್ರಜ್ಞಾನದ ಬಳಕೆಯಲ್ಲಿ, ಡೆಟ್ರಾಯಿಟ್ ಮತ್ತು ಸಿಲಿಕಾನ್ ವ್ಯಾಲಿಯಲ್ಲಿರುವ ತನ್ನ ಪ್ರತಿಸ್ಪರ್ಧಿಗಳನ್ನು ಉಬರ್ ಹಿಂದಿಕ್ಕಿದೆ. ಲೇಸರ್‌ಗಳು, ಕ್ಯಾಮರಗಳು ಮತ್ತು ಇತರ ಸೆನ್ಸರ್‌ಗಳಿಂದ ಸಜ್ಜಿತವಾದ ಹಾಗೂ ಚಾಲಕನಿಲ್ಲದ ಕಾರುಗಳನ್ನು ವೆಬ್ ಆಧಾರಿತ ಬಾಡಿಗೆ ಕಾರು ಕಂಪೆನಿ ಪಿಟ್ಸ್‌ಬರ್ಗ್‌ನ ಸವಾಲುದಾಯಕ ರಸ್ತೆಗಳಲ್ಲಿ ನಿಯೋಜಿಸಿದೆ.
ಉಬರ್‌ನ ಖಾಯಂ ಪ್ರಯಾಣಿಕರನ್ನು ಹಿಂದೆ ಮಾನವ ಚಾಲಿತ ಕಾರುಗಳು ಕರೆದೊಯ್ಯುತ್ತಿದ್ದರೆ, ಇನ್ನು ಮುಂದೆ ಸ್ವಯಂಚಾಲಿತ ಕಾರುಗಳು ಕರೆದೊಯ್ಯಲಿವೆ.
ನಾಲ್ಕು ಫೋರ್ಡ್ ಫ್ಯೂಶನ್ ಕಾರುಗಳನ್ನು ಆಯ್ದ ಪ್ರಯಾಣಿಕರನ್ನು ಕರೆದೊಯ್ಯಲು ಬುಧವಾರ ನಿಯೋಜಿಸಲಾಗಿದೆ. ರಸ್ತೆಗಿಳಿಯಲು ಇನ್ನೂ ಒಂದು ಡಝನ್ ಕಾರುಗಳು ಸಿದ್ಧವಾಗಿವೆ ಎಂದು ಕಂಪೆನಿ ಹೇಳಿದೆ.





