ನಾಳೆ ಗೋವಾದಲ್ಲಿ ಬ್ರಿಕ್ಸ್ ಪರಿಸರ ಸಚಿವರ ಸಭೆ
ಪಣಜಿ, ಸೆ.14: ಬ್ರಿಕ್ಸ್ ರಾಷ್ಟ್ರಗಳ ಪರಿಸರ ಸಚಿವರ ಸಭೆ ಸೆ.16ರಂದು ಗೋವಾದಲ್ಲಿ ನಡೆಯಲಿದೆ. ಅವರು ಗಾಳಿ ಹಾಗೂ ನೀರಿನ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸುವ ಕುರಿತು ಚರ್ಚಿಸಲಿದ್ದಾರೆ.
ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆಯ ಸಹಾಯಕ ಸಚಿವ ಅನಿಲ್ ಮಾಧವ ದವೆ, ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಗೋವೆಗೆ ಆಗಮಿಸಲಿದ್ದಾರೆಂದು ಅಧಿಕೃತ ಪ್ರಕಟನೆಯೊಂದು ತಿಳಿಸಿದೆ.
ಬ್ರಿಕ್ಸ್ ಸಚಿವರು ಪರಸ್ಪರ ಹಿತಾಸಕ್ತಿಯ ಸೈದ್ಧಾಂತಿಕ ಕ್ಷೇತ್ರಗಳು ಹಾಗೂ ಗಾಳಿ, ನೀರು ಮಾಲಿನ್ಯ, ಘನ-ದ್ರವ್ಯ ತ್ಯಾಜ್ಯ ವಿಲೇವಾರಿ, ಹವಾಮಾನ ಬದಲಾವಣೆ ಮತ್ತು ಜೀವ ವೈವಿಧ್ಯದ ರಕ್ಷಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಆದ್ಯತೆಯ ಕ್ರಮಗಳ ಕುರಿತು ಚರ್ಚಿಸುವ ನಿರೀಕ್ಷೆಯಿದೆ.
ಇದು, ಮುಂದಿನ ತಿಂಗಳು ಗೋವಾದಲ್ಲಿ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ಮುಖ್ಯಸ್ಥರ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಕೇಂದ್ರದ ವಿವಿಧ ಸಚಿವಾಲಯಗಳು ಹಮ್ಮಿಕೊಳ್ಳುತ್ತಿರುವ ಸರಣಿ ಸಭೆಗಳಲ್ಲಿ ಒಂದಾಗಿದೆ.
ಬ್ರಿಕ್ಸ್ ಪರಿಸರ ಸಚಿವರ ಸಭೆಯನ್ನು ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಆಯೋಜಿಸಿದೆ.
ಅಭಿವೃದ್ಧಿಗೆ ಆರ್ಥಿಕ ಸಹಕಾರ, ತಾಳಿಕೆಯ ಅಭಿವೃದ್ಧಿಗುರಿ ಹಾಗೂ ಪ್ಯಾರಿಸ್ ಒಪ್ಪಂದಗಳಂತಹ ಮಹತ್ವದ ಜಾಗತಿಕ ಪಾರಿಸರಿಕ ಒಪ್ಪಂದಗಳನ್ನು ಕಳೆದ ವರ್ಷ ಅಳವಡಿಸಿರುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ.





