ಗೋವಾದಲ್ಲಿ ಕಾಸಿನೊ ಜಾಹೀರಾತು ನಿಷೇಧಿಸುವಂತೆ ಕಾಂಗ್ರೆಸ್ ಆಗ್ರಹ
ಪಣಜಿ, ಸೆ.14: ಗೋವಾದಲ್ಲಿ ಕ್ಯಾಸಿನೊಗಳನ್ನು ಉತ್ತೇಜಿಸುವ ಜಾಹೀರಾತುಗಳಿಗೆ ನಿಷೇಧ ವಿಧಿಸಬೇಕು. ಅವು ಯುವ ಮನಸ್ಸುಗಳ ಮೇಲೆ ತಪ್ಪು ಭಾವನೆ ಮೂಡಿಸುತ್ತವೆಯೆಂದು ಕಾಂಗ್ರೆಸ್ ಇಂದು ಆಗ್ರಹಿಸಿದೆ.
ಸಿಗರೇಟ್ ಹಾಗೂ ಮದ್ಯದ ಜಾಹೀರಾತುಗಳನ್ನು ನಿಷೇಧಿಸಿರುವಂತೆಯೇ ಕ್ಯಾಸಿನೊಗಳ ಜಾಹೀರಾತುಗಳನ್ನೂ ನಿರ್ಬಂಧಿಸಬೇಕು. ರಾಜ್ಯ ಸರಕಾರವು ಈ ನಿಷೇಧ ಹೇರಬೇಕೆಂದು ಗೋವಾ ಕಾಂಗ್ರೆಸ್ ಅಧ್ಯಕ್ಷೆ ಲುಝಿನೊ ಫಲೇರಿಯೊ ಇಂದಿಲ್ಲಿ ಪತ್ರಕರ್ತರೊಡನೆ ಹೇಳಿದರು.
ಕ್ಯಾಸಿನೊ ಮಾಲಕ ಜಯದೇವ್ ಮೋದಿ ನೇತೃತ್ವದ ಗುಂಪು ಐಎಸ್‌ಎಲ್‌ನ ಎಫ್‌ಸಿ ಗೋವಾ ಫುಟ್ಬಾಲ್ ತಂಡವನ್ನು ವಶಕ್ಕೆ ಪಡೆದಿರುವ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಕ್ಕಳು ಫುಟ್ಬಾಲ್ ಪಂದ್ಯನೋಡಲು ಅಂಗಳಕ್ಕೆ ಹೋದಾಗ ಅವರು ಕ್ಯಾಸಿನೊದ ಜಾಹೀರಾತು ನೋಡುತ್ತಾರೆ. ಇದು ಅವರ ಎಳೆ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಗೋವಾದಲ್ಲಿ ಸಮುದ್ರದೊಳಗೆ 6 ಕ್ಯಾಸಿನೊ ಹಡಗುಗಳಿದ್ದು, ತೀರದಲ್ಲಿ ಡಜನ್‌ಗೂ ಹೆಚ್ಚು ಕ್ಯಾಸಿನೊಗಳು ಕಾರ್ಯಾಚರಿಸುತ್ತಿವೆ.
ಕ್ಯಾಸಿನೊಗಳ ಹಣೆಬರಹ ನಿರ್ಧರಿಸಲು ಜನರ ಅಭಿಪ್ರಾಯ ಪಡೆಯಬೇಕೆಂದು ಫೆಲಿಕೊ ಅಭಿಪ್ರಾಯಿಸಿದರು.
ಕ್ಯಾಸಿನೊಗಳು ರಾಜ್ಯದಿಂದ ಹೊರಗೆ ಹೋಗಬೇಕು. ಆಳ ಸಮುದ್ರಕ್ಕೆ ಹೋಗಬೇಕು. ಆದರೆ ರಾಜ್ಯದಲ್ಲಿ ಕ್ಯಾಸಿನೊ ಬೇಕೇ ಬೇಡವೇ ಎಂಬ ಬಗ್ಗೆ ಜನರ ಅಭಿಪ್ರಾಯ ಪಡೆಯಬೇಕು. ಸಾರ್ವಜನಿಕರ ಬಳಿಗೆ ತಾವು ಹೋಗಲಿದ್ದೇವೆಂದು ಫೆಲಿರೊ ತಿಳಿಸಿದರು.





