ಆರೆಸ್ಸೆಸ್-ಹಿಂದೂ ಮಹಾಸಭಾ ಉತ್ತಮ ಸಂಬಂಧ ಹೊಂದಿರಲಿಲ್ಲ
ಸಂಘದ ಸಿದ್ಧಾಂತವಾದಿ ಸಿನ್ಹಾ
ಹೊಸದಿಲ್ಲಿ,ಸೆ.14: ಮಹಾತ್ಮ ಗಾಂಧಿ ಮತ್ತು ಅವರ ಚಿಂತನೆಯ ವಿಧಾನದ ಬಗ್ಗೆ ತಮ್ಮ ನಿಲುವುಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಪರಸ್ಪರ ಸಹಮತ ಹೊಂದಿರಲಿಲ್ಲ ಮತ್ತು ಕಾಲಕ್ರಮೇಣ ಅವುಗಳ ನಡುವಿನ ಸಂಬಂಧ ಹದಗೆಟ್ಟಿತ್ತು ಎಂದು ಆರೆಸ್ಸೆಸ್‌ನ ಸಿದ್ಧಾಂತವಾದಿ,ದಿಲ್ಲಿ ವಿವಿಯ ಪ್ರೊಫೆಸರ್ ರಾಕೇಶ್ ಸಿನ್ಹಾ ಹೇಳಿದ್ದಾರೆ.
ಮಹಾತ್ಮ ಗಾಂಧಿಯವರ ಹತ್ಯೆಯ ಹಿಂದೆ ಆರೆಸ್ಸೆಸ್‌ನ ಕೈವಾಡವಿತ್ತು ಎಂಬ ತನ್ನ ಹೇಳಿಕೆಗೆ ಬದ್ಧರಾಗಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ತನ್ನ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯನ್ನು ಎದುರಿಸಲು ನಿರ್ಧರಿಸಿರುವುದರಿಂದ ಕೇಸರಿ ಪರಿವಾರವೀಗ ಗಾಂಧಿಯವರ ಹಂತಕ ನಾಥೂರಾಮ್ ಗೋಡ್ಸೆ ಮತ್ತು ಹಿಂದೂ ಮಹಾಸಭಾದ ಜೊತೆಗೆ ಆರೆಸ್ಸೆಸ್ ಉತ್ತಮ ಸಂಬಂಧಗಳನ್ನು ಹೊಂದಿರಲಿಲ್ಲ ಎಂದು ತಾನು ರುಜುವಾತು ಪಡಿಸಬಹುದಾದ ದಾಖಲೆಗಳಿಗಾಗಿ ತಡಕಾಡುತ್ತಿದೆ.
ಆರೆಸ್ಸೆಸ್ ಹಿಂದೂ ಯುವಶಕ್ತಿಯನ್ನು ವ್ಯರ್ಥಗೊಳಿಸುತ್ತಿದೆ ಎಂದು ದೂರಿ ಗೋಡ್ಸೆ ಮತ್ತು ಇತರ ನಾಲ್ವರು 1932, ಅಕ್ಟೋಬರ್‌ನಲ್ಲಿ ಹಿಂದೂ ಮಹಾಸಭಾದ ನಾಯಕ ವಿನಾಯಕ ಸಾವರ್ಕರ್ ಅವರಿಗೆ ಪತ್ರವೊಂದನ್ನು ಬರೆದಿದ್ದರು ಎಂದು ಸಿನ್ಹಾ ತಿಳಿಸಿದ್ದಾರೆ. ಈ ಪತ್ರವು ಮಹಾತ್ಮ ಗಾಂಧಿಯವರ ಹತ್ಯೆಯಲ್ಲಿ ತಾನು ಭಾಗಿಯಾಗಿದ್ದೆ ಎಂಬ ಆರೋಪದಿಂದ ಅಂತರ ಕಾಯ್ದು ಕೊಳ್ಳಲು ಆರೆಸ್ಸೆಸ್ ನೆಚ್ಚಿಕೊಂಡಿರುವ ಸಾಕ್ಷ್ಯಾಧಾರಗಳಲ್ಲೊಂದಾಗಿದೆ.





