ಪಂಡಿತ್ ಶಿವಕುಮಾರ್ ಶರ್ಮಾಗೆ ಜೀವಮಾನ ಸಾಧನೆ ಪ್ರಶಸ್ತಿ
ಹೊಸದಿಲ್ಲಿ, ಸೆ.14: ಸಂತೂರ್ ಗಾರುಡಿಗ ಪಂಡಿತ್ ಶಿವಕುಮಾರ್ ಶರ್ಮಾರಿಗೆ ಸಂಗೀತ ಮಾರ್ತಂಡ ಚಾಂದ್‌ಖಾನ್ ಜೀವಮಾನ ಸಾಧನಾ ಪ್ರಶಸ್ತಿ ಪ್ರಾಪ್ತವಾಗಿದೆ. ಇಲ್ಲಿ ನಡೆದ 23ನೆ ಸಮಾರಂಭದಲ್ಲಿ ಅವರನ್ನು ಈ ಪ್ರಶಸ್ತಿಯೊಂದಿಗೆ ಗೌರವಿಸಲಾಗಿದೆ.
ಜಮ್ಮು ಸಂಜಾತ ಪದ್ಮವಿಭೂಷಣ ಪುರಸ್ಕೃತ ಶರ್ಮಾ, ಸಂಗೀತೋತ್ಸವದಲ್ಲಿ ‘ಕೌಸಿ-ಕಾಂಡ’ ರಾಗವನ್ನು ನುಡಿಸುವ ಮೂಲಕ ಶ್ರೋತೃಗಳನ್ನು ಮಂತ್ರಮುಗ್ಧಗೊಳಿಸಿದರು. ಇಲ್ಲಿ ಭಾರತೀಯ ಶಾಸ್ತ್ರೀಯ ಕಲೆಯನ್ನು ಸಂಭ್ರಮಿಸಲು ಖ್ಯಾತ ಹಿಂದೂಸ್ಥಾನಿ ಸಂಗೀತಗಾರರೆಲ್ಲ ಒಂದುಗೂಡಿದ್ದರು.
ಪ್ರಶಸ್ತಿಯು 50 ಸಾವಿರ ರೂ. ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ.
ಸೂರ್‌ಸಾಗರ್ ಸೊಸೈಟಿ ಆಯೋಜಿಸುತ್ತಿರುವ ಈ ಉತ್ಸವದಲ್ಲಿ ಸಂಗೀತ ಹಾಗೂ ನೃತ್ಯ ಕಲೆಗಳ ಮಹಾನ್ ಸಾಧಕರನ್ನು ಗುರುತಿಸಲು 1986ರಿಂದ ಈ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ.
Next Story





