ಪಾಕಿಸ್ತಾನದ ಮುಲ್ತಾನ್‌ನಲ್ಲಿ ರೈಲು ಅಪಘಾತ; ಆರು ಸಾವು,150ಕ್ಕೂ ಅಧಿಕ ಮಂದಿಗೆ ಗಾಯ

ಲಾಹೋರ್, ಸೆ.15: ಪಾಕಿಸ್ತಾನದ ಮುಲ್ತಾನ್‌ನಲ್ಲಿ ಪ್ರಯಾಣಿಕರ ರೈಲು ಮತ್ತು ಸರಕು ಸಾಗಾಟದ ರೈಲು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟು, 150ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯವಾಗಿರುವ ಘಟನೆ ಇಂದು ನಡೆದಿದೆ.
ಬುಚ್ ರೈಲು ನಿಲ್ದಾಣದ ಸಮೀಪ ಈ ದುರ್ಘಟನೆ ನಡೆದಿದೆ. ವ್ಯಕ್ತಿಯೊಬ್ಬ ರೈಲಿಗೆ ಅಡ್ಡಬಂದಾಗ ಸರಕು ರೈಲಿನ ಚಾಲಕ ರೈಲನ್ನು ನಿಲ್ಲಿಸಿದ ಎನ್ನಲಾಗಿದೆ. ಅಷ್ಟರಲ್ಲಿ ಸರಕು ಸಾಗಾಟದ ರೈಲಿಗೆ ಪ್ರಯಾಣಿಕರ ರೈಲು ಅವಾಮ್ ಎಕ್ಸ್ ಪ್ರೆಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ದುರ್ಘಟನೆಯಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರು. 150 ಮಂದಿ ಗಾಯಗೊಂಡರು. ಈ ಪೈಕಿ 10 ಮಂದಿ ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ. ನಜ್ಜುಗುಜ್ಜಾಗಿದ್ದ ರೈಲು ಬೋಗಿಗಳಲ್ಲಿ ಸಿಲುಕಿಕೊಂಡಿರುವ ಆರು ಮಂದಿಯನ್ನು ರಕ್ಷಿಸಲಾಗಿದೆ.
ಕರಾಚಿಯಿಂದ ಪೇಶಾವರಕ್ಕೆ ಪ್ರಯಾಣಿಕರ ರೈಲು ಸಂಚರಿಸುತ್ತಿತ್ತು.
ಗಾಯಗೊಂಡವರನ್ನು ಮುಲ್ತಾನ್‌ನ ನಿಶ್ತಾರ್ ಮೆಡಿಕಲ್ ಆಸ್ಪತ್ರೆ ಮತ್ತು ಶಹ್‌ಬಾಝ್ ಶರೀಫ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.





