ಬೀದಿನಾಯಿಗಳು ಮನುಷ್ಯರಿಗೆ ಬೆದರಿಕೆ ಆಗಬಾರದು: ಸುಪ್ರೀಂಕೋರ್ಟ್

ಹೊಸದಿಲ್ಲಿ,ಸೆ.15: ಬೀದಿನಾಯಿಗಳು ಮನುಷ್ಯರಿಗೆ ಬೆದರಿಕೆ ಆಗಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ ಅವುಗಳಿಗೆ ಅನುಕಂಪ ತೋರಿಸಬೇಕು. ಈ ವಿಷಯದಲ್ಲಿ ಸಂತುಲನಾತ್ಮಕ ನಿಲುವನ್ನು ಸ್ವೀಕರಿಸಬೇಕಾಗಿದೆ ಎಂದು ಕೋರ್ಟು ತಿಳಿಸಿದೆ ಎಂದು ವರದಿಯಾಗಿದೆ.ಕೇರಳದಲ್ಲಿ ಬೀದಿನಾಯಿಗಳ ಕುರಿತು ತನ್ನಮುಂದಿರುವ ಅರ್ಜಿಗಳನ್ನು ಪರಿಗಣಿಸುತ್ತಾ ಸುಪ್ರೀಂಕೋರ್ಟಿನ ಜಸ್ಟಿಸ್ ದೀಪಕ್ ಮಿಶ್ರ, ಯು.ಯು. ಲಲಿತಾ ಅವರಿದ್ದ ಬೆಂಚ್ ಈ ಪರಾಮರ್ಶೆಯನ್ನು ಮಾಡಿದೆ.
ಪ್ರಾಣಿಪ್ರಿಯರು ಮತ್ತು ಸ್ವಯಂಸೇವಾ ಸಂಸ್ಥೆಗಳು ಸಲ್ಲಿಸಿರುವ ಹದಿನಾಲ್ಕು ಅರ್ಜಿಗಳು ಸುಪ್ರೀಂಕೋರ್ಟಿ ಮುಂದಿವೆ. ಬೀದಿನಾಯಿಗಳ ದಾಳಿಗೆ ಸಂಬಂಧಿಸಿದ ದೂರನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ನೇಮಕಗೊಳಿಸಿರುವ ಜಸ್ಟಿಸ್ ಎಸ್. ಸಿರಿಜಗನ್ ಸಮಿತಿ ತನ್ನ ವರದಿಯನ್ನು ಶೀಘ್ರವೇ ಸಮರ್ಪಿಸಲಿದೆ ಎಂದು ಕೇರಳ ಸರಕಾರ ಸುಪ್ರೀಂಕೋರ್ಟಿಗೆ ತಿಳಿಸಿದೆ.ಬೀದಿನಾಯಿಗಳ ಉಪಟಳ ಪರಿಹರಿಸುವುದಕ್ಕೆ ಅಗತ್ಯವಾದ ಉಪಾಯಗಳನ್ನು ಪ್ರಾಣಿಸಂರಕ್ಷಣಾ ಬೋರ್ಡ್ ಕೋರ್ಟಿಗೆ ವಿವರಿಸಿದೆ. ಈ ವಿಷಯದಲ್ಲಿ ಅಕ್ಟೋಬರ್ ನಾಲ್ಕರಂದು ವಾದವನ್ನು ಆಲಿಸಲಾಗುವುದೆಂದು ಕೋರ್ಟು ತಿಳಿಸಿದೆ.
ಈ ಹಿಂದೆ ಅಕ್ರಮಾಸಕ್ತ ಬೀದಿಶ್ವಾನಗಳನ್ನು ಕೊಲ್ಲಲಾಗುವುದೆಂದು ಕೇರಳದ ಸಚಿವ ಕೆ.ಟಿ ಜಲೀಲ್ ಹೇಳಿದ್ದರೂ ಈ ವಿಷಯವನ್ನು ಸುಪ್ರೀಂಕೋರ್ಟಿನಲ್ಲಿ ಕೇರಳದ ವಕೀಲರು ಪ್ರಸ್ತಾಪಿಸಿಲ್ಲ. ಕಾನೂನು ತೊಡಕು ಇರುವುದರಿಂದ ಕೇರಳ ಈ ನಿಲುವು ತೆಗೆಯಬೇಕಾಯಿತೆಂದು ಜಲೀಲ್ ಸ್ಪಷ್ಟಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.





