ಉಡುಪಿ: ರೈಲ್ ರೋಕೊ ನಡೆಸಲು ಮುಂದಾದ ಕರವೇ ಕಾರ್ಯಕರ್ತರ ಬಂಧನ

ಉಡುಪಿ, ಸೆ.15: ಕಾವೇರಿ ನದಿ ನೀರಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪು ಕರ್ನಾಟಕದ ವಿರುದ್ಧವಾಗಿ ಬಂದಿರುವುದನ್ನು ಖಂಡಿಸಿ ಹಾಗೂ ಈ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಿ ಕರ್ನಾಟಕಕ್ಕೆ ನ್ಯಾಯ ಒದಗಿಸಿ ಕೊಡಬೇಕಾಗಿ ಆಗ್ರಹಿಸಿ ರೈಲ್ ರೋಕೊ ನಡೆಸಲು ಮುಂದಾದ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಇಂದ್ರಾಳಿಯ ರೈಲ್ವೆ ನಿಲ್ದಾಣದ ಎದುರು ಧರಣಿ ನಡೆಸಿದ ಕಾರ್ಯಕರ್ತರು ಬೆಳಗ್ಗೆ 10.15ಕ್ಕೆ ನಿಲ್ದಾಣಕ್ಕೆ ಆಗಮಿಸಿದ ಮಂಗಳೂರು ಮಡಗಾಂವ್ ಇಂಟರ್‌ಸಿಟಿ ರೈಲನ್ನು ತಡೆಯಲು ಒಳನುಗ್ಗಿದರು. ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ರೈಲ್‌ರೋಕೋ ನಡೆಸಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ತಡೆದರು. ಬಳಿಕ ಪೊಲೀಸರು ಎಲ್ಲ ಕಾರ್ಯಕರ್ತರನ್ನು ಬಂಧಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಮುಖಂಡರಾದ ಪ್ರಸನ್ನಕುಮಾರ್ ಶೆಟ್ಟಿ, ರಮೇಶ್ ಶೆಟ್ಟಿ, ಅನ್ಸಾರ್ ಅಹ್ಮದ್, ಸಂತೋಷ್ ಶೆಟ್ಟಿ, ವಿಜಯೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Next Story





