ಕಾವೇರಿ ವಿವಾದ: ಕಾನೂನು ತಜ್ಞರ ಜೊತೆ ಸಿಎಂ ಸಮಾಲೋಚನಾ ಸಭೆ

ಬೆಂಗಳೂರು, ಸೆ.15: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕಾನೂನು ತಜ್ಞರ ಜೊತೆ ಸಮಾಲೋಚನಾ ಸಭೆ ನಡೆಸಿದರು.
ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಞಾದಲ್ಲಿಂದು ಬೆಳಗ್ಗೆ 9:30ಕ್ಕೆ ಸಭೆ ನಡೆಯಿತು. ಸೆ.19ರಂದು ಕಾವೇರಿ ಮೇಲುಸ್ತುವಾರಿ ಸಮಿತಿಯೆದುರು ಮಂಡಿಸಬೇಕಾದ ಕಾನೂನಾತ್ಮಕ ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಕಾನೂನು ಸಚಿವ ಟಿ.ಬಿ ಜಯಚಂದ್ರ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಮಾಜಿ ಮತ್ತು ಹಾಲಿ ಅಡ್ವೊಕೇಟ್ ಜನರಲ್ಗಳು, ನಿವೃತ್ತ ನ್ಯಾಯಮೂರ್ತಿಗಳು, ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಕಾವೇರಿ ಮೇಲುಸ್ತುವಾರಿ ಸಮಿತಿ ಮುಂದೆ ಸಮರ್ಥವಾಗಿ ವಾದ ಮಂಡಿಸುವುದು. ತಜ್ಞರ ಅಧ್ಯಯನ ತಂಡವನ್ನು ರಾಜ್ಯಕ್ಕೆ ಕಳುಹಿಸುವಂತೆ ಮನವಿ ಮಾಡುವುದು ಇತ್ಯಾದಿ ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಮುಖ್ಯಮಂತ್ರಿಯವರು ಕಾನೂನು ತಜ್ಞರ ಜೊತೆ, ಅಡ್ವೊಕೇಟ್ ಜನರಲ್ಗಳ ಜೊತೆ ಸಭೆ ನಡೆಸಿದರು. ಕಾವೇರಿಗೆ ಸಂಬಂಧಿಸಿ ನಡೆಯುತ್ತಿರುವ ಕಾನೂನು ಹೋರಾಟ ಹಾಗೂ ಸದ್ಯದ ಪರಿಸ್ಥಿತಿಯನ್ನು ವಿವರಿಸಿದರು. ರಾಜ್ಯದ, ರೈತರ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ತೀರ್ಮಾನಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು ಎಂದರು.
ರಾಜ್ಯದ ಹಿತ ದೃಷ್ಟಿಯಿಂದ ಕಾವೇರಿ ಕಣಿವೆಯ ರೈತರ ಹಿತದೃಷ್ಟಿಯಿಂದ, ಕುಡಿಯೋ ನೀರಿನ ಸಮಸ್ಯ ಬಗ್ಗೆ ಯಾವ ರೀತಿ ಮೇಲುಸ್ತುವಾರಿ ಸಮಿತಿಗೆ ಮನವರಿಕೆ ಮಾಡಿಕೊಡಲು ಕಾನೂನು ತಜ್ಞರು ಉಪಯುಕ್ತ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.
ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಸಭೆಯಲ್ಲಿ ಕಾನೂನು ತಜ್ಞರು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಅದನ್ನು ಸೆ.20ರಂದು ಸುಪ್ರಿಂ ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಹಾಗೂ ನ್ಯಾಯಮಂಡಳಿ, ಉಸ್ತುವಾರಿ ಸಮಿತಿಯ ಮುಂದೆ ವಾದ ಮಂಡಿಸುವಾಗ ಬಳಸಿಕೊಳ್ಳುತ್ತೇವೆ.ರಾಜ್ಯದ ಜನರ ಹಿತ ಗಮನಿಸಿ ಸುಪ್ರೀಂಕೋರ್ಟ ಸೆ.20ರಂದು ತೀರ್ಪು ನೀಡಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.





