ಭಾಷೆಯ ಹೆಸರಲ್ಲಿ ಸಮಾಜವನ್ನು ಛಿದ್ರಗೊಳಿಸಲು ಅವಕಾಶ ನೀಡಬಾರದು: ಸಚಿವ ರಮೇಶ್ ಕುಮಾರ್
.jpg)
ಕುಂಬಳೆ, ಸೆ.15: ಭಾಷೆ ಭಾವನೆಗಳನ್ನು ಪರಸ್ಪರ ವ್ಯಕ್ತಪಡಿಸುವ ಮಾಧ್ಯಮವಾಗಿರಬೇಕೇ ಹೊರತು, ಭಾಷೆಯ ಹೆಸರಲ್ಲಿ ಸಮಾಜವನ್ನು ಛಿದ್ರಗೊಳಿಸುವ,ಇತಿಹಾಸವನ್ನು ತಿರುಚುವ ಕೆಟ್ಟ ಸಂಪ್ರದಾಯಗಳಿಗೆ ಅವಕಾಶವಾಗದಂತೆ ಇರುವ ಪ್ರಜ್ಞೆ ಜಾಗೃತವಾಗಿರಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ ಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ, ಸ್ಥಳೀಯ ಸುಬ್ಬಯ್ಯಕಟ್ಟೆ ಕನ್ನಡ ಸಂಘದ ಸಹಕಾರದೊಂದಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗಳ ಸಹಕಾರದೊಂದಿಗೆ ಹಮ್ಮಿಕೊಂಡ 13ನೆ ಜಾನಪದ ಸಂಚಾರ ಮತ್ತು ಓಣಂ ಹಬ್ಬದ ಆಚರಣೆಯನ್ನು ಗುರುವಾರ ಬಂದ್ಯೋಡು ಸಮೀಪದ ಕುಡಾಲು ಮೇರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕರಾವಳಿಯ ಪ್ರಾಚೀನ ಜಾನಪದ,ಹಬ್ಬ ಆಚರಣೆಗಳು ಇತರೆಡೆಗಳಿಗಿಂತ ಭಿನ್ನವಾಗಿದ್ದು, ಈ ಪೈಕಿ ಓಣಂ ಸರ್ವ ಧರ್ಮಗಳ ಸಹಭಾಗಿತ್ವದಲ್ಲಿ ಆಚರಿಸಲ್ಪಡುತ್ತಿರುವುದು ವಿಶೇಷವೆಂದು ತಿಳಿಸಿದ ಸಚಿವರು, ಈ ರಾಷ್ಟ್ರದ ಸಹಬಾಳ್ವೆ, ಪಾರಂಪರಿಕ ಸೋದರ ಭಾವನೆಗಳನ್ನು ಮುನ್ನಡೆಸುವಲ್ಲಿ ಇಂತಹ ಆಚರಣೆಗಳು ಪ್ರಧಾನ ಪಾತ್ರವಹಿಸುತ್ತವೆಯೆಂದು ಅವರು ತಿಳಿಸಿದರು.
ಇತಿಹಾಸಕ್ಕೆ ಅಪಚಾರವಾಗದಂತೆ ಜಾನಪದ ಆಚರಣೆಗಳು,ಹಬ್ಬಗಳನ್ನು ಮುನ್ನಡೆಸುವ ಹೊಣೆಗಾರಿಕೆ ಯುವ ಸಮುದಾಯಕ್ಕಿದ್ದು, ಅವುಗಳನ್ನು ತಿರುಚುವ ಯತ್ನಗಳ ಬಗ್ಗೆ ಜಾಗೃತರಾಗಬೇಕೆಂದು ಕರೆ ನೀಡಿದರು.
ಭಾಷೆ, ವಿಭಿನ್ನ ಸಂಸ್ಕೃತಿಗಳು ಭಾವನೆಗಳನ್ನು, ಕಾಲಘಟ್ಟಗಳ ಜೀವನ ಕ್ರಮಗಳನ್ನು ವ್ಯಕ್ತಪಡಿಸುವ ಸಾಧನಗಳೇ ಹೊರತು ಅದು ಗೋಡೆಗಳಾಗಿ ವಿಘಟನೆಗಳಿಗೆ ಎಂದೂ ಆಸ್ಪದವೀಯಬಾರದು ಎಂದು ಎಚ್ಚರಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಂಸದ ಪಿ.ಕರುಣಾಕರನ್ ಮಾತನಾಡಿ, ಶಾಂತಿ, ಸೌಹಾರ್ದತೆಗೆ ಮಾದರಿಯಾದ ಗಡಿ ಜಿಲ್ಲೆ ಕಾಸರಗೋಡು ಹಲವು ಸಂಸ್ಕೃತಿಗಳ ಜನರಿಂದ ವಿಶಿಷ್ಟವಾಗಿ ಗುರುತಿಸಿಕೊಂಡು ತನ್ನದೇ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಕೇಶವ ಪ್ರಸಾದ ನಾಣಿತ್ತಿಲು ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದುವರಿಯುತ್ತಿರುವ ಆಧುನಿಕ ಸಮಾಜದಲ್ಲಿ ವ್ಯಕ್ತಿ, ವ್ಯಕ್ತಿತ್ವಗಳ ನಡುವಿನ ಹೊಂದಾಣಿಕೆಗಳನ್ನು ಉಳಿಸುವ ನಿಟ್ಟಿನಲ್ಲಿ ಜಾನಪದ ಪರಿಷತ್ತು ವಿಸ್ಕೃತ ಚಟುವಟಿಕೆಗಳನ್ನು ನಡೆಸುತ್ತಿದ್ದು, ಈ ಹಿನ್ನೆಲೆಯ ಪ್ರಾಚೀನ ಜಾನಪದ ಕಲೆ,ಸಾಹಿತ್ಯಗಳ ಮರು ವ್ಯಾಖ್ಯೆಗಳೊಂದಿಗೆ ಪ್ರದರ್ಶನ, ತರಬೇತಿಗಳನ್ನು ನೀಡುವಲ್ಲಿ ಕಾರ್ಯಪ್ರವೃತ್ತವಾಗಿದೆಯೆಂದು ತಿಳಿಸಿದರು. ಮತ, ಪಂಥಗಳಾಚೆಗೆ ನಮ್ಮನ್ನು ನಾವು ಅರಿಯಲು ಪ್ರಯತ್ನಿಸಿದಾಗ ಒಳಗಿನ ಭಾವ ಶುದ್ಧಿ ಪ್ರಖರಗೊಂಡು ವೈಶಾಲ್ಯತೆಗೆ ಬದುಕನ್ನು ತೆರೆದುಕೊಡುತ್ತದೆ. ಇದರಿಂದ ಏಕತೆ, ಸಮೃದ್ದಿ ನೆಲೆಗೊಳ್ಳುತ್ತದೆಯೆಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತೀ ಜೆ.ಶೆಟ್ಟಿ, ಡಾ.ಅನಂತ ಕಾಮತ್, ಸಮಾಜ ಸೇವಕ ಸೀತಾರಾಮ ಶೆಟ್ಟಿ ಭಂಡಾರಗುತ್ತು, ಬಿ.ಕೆ.ಖಾದರ್ ಹಾಜಿ, ಮಂಜೇಶ್ವರ ಭೂ ಅಭಿವೃದ್ದಿ ಬ್ಯಾಂಕ್ ನಿರ್ದೇಶಕ ಹನೀಫ್ ಚೇವಾರು, ಎಸ್ ಅಚ್ಚುತ ರಾವ್, ಅಬ್ದುಲ್ಲತೀಫ್ ಬಿ.ಎ, ರಾಮಕೃಷ್ಣ ಭಂಡಾರಿ, ಅಶೋಕ ಭಂಡಾರಿ, ಇಬ್ರಾಹೀಂ ಎನ್, ಬಶೀರ್ ಬಿ.ಎ. ಮೊದಲಾದವರು ಉಪಸ್ಥಿತರಿದ್ದರು.
ಸುಬ್ಬಯ್ಯಕಟ್ಟೆ ತರಂಗಿಣಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಎಸ್.ಕೆ.ಬಾಲಕೃಷ್ಣ ಸ್ವಾಗತಿಸಿ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ವಸಂತ ಮಾಸ್ತರ್ ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕ ಮತ್ತು ಕೊಡವ ಸಾಹಿತ್ಯ ಅಕಾಡೆಮಿ ಮಡಿಕೇರಿ ಇವುಗಳ ಕಲಾ ತಂಡಗಳಿಂದ ವೈವಿಧ್ಯಮಯ ಜಾನಪದ ನೃತ್ಯ ಪ್ರಾತ್ಯಕ್ಷಿಕೆಗಳು ನಡೆದವು. ಮಡಿಕೇರಿಯ ವಿರಾಜಪೇಟೆ ಕುಂಟಲಗೇರಿಯ ಚರಮಂಡ ಅಪ್ಪಣ್ಣು ಪೂವಯ್ಯರ ಜಾನಪದ ಕಲಾತಂಡದ ಬೊಳಕ್ಕಾಟ್ ಮತ್ತು ಕೋಲಾಟ, ಮುಂಡಂಡ ಚಿತ್ರಾತಂಡದವರ ಉಮ್ಮತ್ತಾಟ್ ಸಹಿತ ವಿವಿಧ ನೃತ್ಯ ಹಾಡುಗಳು ಮಸೂರೆಗೊಳ್ಳುವ ಪ್ರದರ್ಶನ ನೀಡಿದವು. ಓಣಂ ಹಬ್ಬದ ಅಂಗವಾಗಿ ವಿಶಿಷ್ಟ ಪುಷ್ಪರಂಗೋಲಿಯನ್ನು ಸಚಿವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.







