500ನೆ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐನಿಂದ ಮಾಜಿ ನಾಯಕರಿಗೆ ಆಹ್ವಾನ
ಅಝರುದ್ದೀನ್ ಗೆ ಆಮಂತ್ರಣವಿಲ್ಲ

ಹೊಸದಿಲ್ಲಿ, ಸೆ.15: ಕಾನ್ಪುರದಲ್ಲಿ ಸೆ.22ರಂದು ಆರಂಭಗೊಳ್ಳಲಿರುವ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಭಾರತದ 500ನೆ ಟೆಸ್ಟ್ ಪಂದ್ಯವಾಗಿದ್ದು, ಸ್ಮರಣೀಯ ಈ ಟೆಸ್ಟ್ ಪಂದ್ಯಕ್ಕೆ ಭಾರತದ ಎಲ್ಲ ಮಾಜಿ ನಾಯಕರುಗಳಿಗೆ ಬಿಸಿಸಿಐ ಆಹ್ವಾನ ನೀಡಲಿದೆ.
ಗ್ರೀನ್ ಪಾರ್ಕ್‌ನಲ್ಲಿ ನಡೆಯಲಿರುವ ಟೆಸ್ಟ್‌ನ ಟಾಸ್‌ಗೆ ವಿಶೇಷ ಬೆಳ್ಳಿ ನಾಣ್ಯವನ್ನು ಹೊರ ತರಲು ಉದ್ದೇಶಿಸಲಾಗಿದೆ ಎಂದು ಯುಪಿಸಿಎ ಅಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ನಾರಿ ಕಂಟ್ರಾಕ್ಟರ್, ಚಂದು ಬೋರ್ಡೆ, ದಿಲೀಪ್ ವೆಂಗ್‌ಸರ್ಕಾರ್, ಕಪಿಲ್ ದೇವ್, ರವಿ ಶಾಸ್ತ್ರಿ, ಸುನೀಲ್ ಗವಾಸ್ಕರ್, ಸೌರವ್ ಗಂಗುಲಿ, ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ಕೆ.ಶ್ರೀಕಾಂತ್, ಮಹೇಂದ್ರ ಸಿಂಗ್ ಧೋನಿ, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಸೇರಿದಂತೆ ಮಾಜಿ ನಾಯಕರುಗಳನ್ನು ಆಹ್ವಾನಿಸಲು ಬಿಸಿಸಿಐ ತೀರ್ಮಾನಿಸಿದೆ.
ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಅವರಿಗೆ ಆಹ್ವಾನ ನೀಡದಿರಲು ಬಿಸಿಸಿಐ ನಿರ್ಧರಿಸಿದೆ. ಅಝರುದ್ದೀನ್ 2000ರಲ್ಲಿ ಮ್ಯಾಚ್ ಫಿಕ್ಸಿಂಗ್ ಹಗರಣಲ್ಲಿ ಸಿಲುಕಿಕೊಂಡು ಆಜೀವ ನಿಷೇಧಕ್ಕೆ ಒಳಗಾಗಿದ್ದರು. ನ್ಯಾಯಾಲಯದಿಂದ ಅವರು ಕ್ಲೀನ್ ಚಿಟ್ ಪಡೆದಿದ್ದರೂ, ಬಿಸಿಸಿಐ ಮಾತ್ರ ಅವರ ವಿರುದ್ಧದ ನಿಷೇಧವನ್ನು ಇನ್ನೂ ಹಿಂಪಡೆದಿಲ್ಲ.





